ಉದ್ಯೋಗ ಭರವಸೆಯೊಡ್ಡಿ ವಂಚನೆ: ಸಚಿತಾ ರೈ ವಿರುದ್ಧ ಮಂಜೇಶ್ವರ, ಕರ್ನಾಟಕದಲ್ಲೂ ಕೇಸು ದಾಖಲು

ಕಾಸರಗೋಡು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವು ದಾಗಿ ಭರವಸೆಯೊಡ್ಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಮಾಜಿ ಡಿವೈಎಫ್‌ಐ ನೇತಾರೆ ಬಾಡೂರು ಎಎಲ್‌ಪಿ ಶಾಲೆ ಅಧ್ಯಾಪಿಕೆ ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27) ವಿರುದ್ಧ ಕರ್ನಾಟಕ ಪೊಲೀಸರು ಕೂಡಾ ಕೇಸು ದಾಖಲಿಸಿಕೊಂಡಿ ದ್ದಾರೆ. ಕಿದೂರಿನ ಅಶ್ವಿನ್ ಎಂಬವರ  ಪತ್ನಿ ಕೆ. ರಕ್ಷಿತ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಸ್‌ಬಿಐಯಲ್ಲಿ ಕ್ಲರ್ಕ್ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ 13,11,600 ರೂಪಾಯಿ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ  ಸಚಿತಾ ರೈಯನ್ನು ಬಂಧಿಸಲಿರುವ ಕ್ರಮಗಳನ್ನು ಕರ್ನಾಟಕ ಪೊಲೀಸರು ಆರಂಭಿಸಿದ್ದಾರೆ. ಬಂಧನದ ಪೂರ್ವಭಾವಿಯಾಗಿ ಉಪ್ಪಿನಂಗಡಿ  ಪೊಲೀಸರು ಶೀಘ್ರ ಕಾಸರಗೋಡಿಗೆ ತಲುಪಲಿದ್ದಾರೆಂಬ ಸೂಚನೆ ಲಭಿಸಿದೆ. ಆದರೆ ಕುಂಬಳೆ ಪೊಲೀಸರು ದಾಖಲಿಸಿದ ವಂಚನೆ ಪ್ರಕರಣದಲ್ಲಿ ಸಚಿತಾ ರೈಯನ್ನು ಬಂಧಿಸುವುದನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಾತ್ಕಾಲಿಕವಾಗಿ ತಡೆದು ಆದೇಶ ಹೊರಡಿಸಿತ್ತು. ಸಚಿತಾ ರೈ ನೀಡಿದ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲೆ ಅಂತಿಮ ತೀರ್ಪು ಬರುವ ವರೆಗೆ ಬಂಧಿಸಕೂಡದೆಂದು ನ್ಯಾಯಾಲಯ ತಿಳಿಸಿದೆ. ಈ ಮಧ್ಯೆ ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿದೆ.

ಪೈವಳಿಕೆ ಕಾಡೂರಿನ ಮೋ ಕ್ಷಿತ್ ಶೆಟ್ಟಿ (28) ನೀಡಿದ ದೂರಿ ನಂತೆ ಕೇಸು ದಾಖಲಿಸಲಾಗಿದೆ. ಕರ್ನಾಟಕದ ಅಬಕಾರಿ ಇಲಾಖೆ ಯಲ್ಲಿ ಉದ್ಯೋಗ ಭರವಸೆಯೊಡ್ಡಿ 1 ಲಕ್ಷ ರೂಪಾಯಿ ಪಡೆದುಕೊಂಡಿ ರುವುದಾಗಿ ದೂರಲಾಗಿದೆ.

2023 ಅಕ್ಟೋಬರ್, ನವೆಂಬರ್ ತಿಂಗಳಲ್ಲಾಗಿ ಹಣ ನೀಡಿರುವುದಾಗಿ ಮೋಕ್ಷಿತ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮಂಜೇಶ್ವರ ಪೊಲೀಸರು ಕೂಡಾ ಕೇಸು ದಾಖಲಿಸುವುದರೊಂದಿಗೆ ಹಣಕಾಸು ವಂಚನೆಗೆ ಸಂಬಂಧಿಸಿ  ಸಚಿತಾ ರೈ ವಿರುದ್ಧ ಕೇರಳ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ ಐದಕ್ಕೇರಿದೆ. ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಕೇಸು, ಬದಿಯಡ್ಕದಲ್ಲಿ ಮೂರು ಕೇಸುಗಳು ಈಗಾಗಲೇ ದಾಖಲಾಗಿವೆ.

You cannot copy contents of this page