ಉಪ್ಪಳದಲ್ಲಿ ಪೊಲೀಸರ ಮೇಲೆ ಹಲ್ಲೆ: ಆರೋಪಿಗಳ ಮಾಹಿತಿ ಲಭ್ಯ
ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಹಲ್ಲೆನಡೆಸಿದ ಪ್ರಕರಣದ ಆರೋಪಿಗಳ ಕುರಿತು ಮಾಹಿತಿ ಲಭ್ಯವಾಗಿದೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮುಂಜಾನೆ ೩ ಗಂಟೆ ವೇಳೆ ಉಪ್ಪಳ ಹಿದಾಯತ್ ನಗರದಲ್ಲಿ ಮಂಜೇಶ್ವರ ಎಸ್ಐ ಪಿ. ಅನೂಪ್ ಹಾಗೂ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್ರ ಮೇಲೆ ೫ ಮಂದಿ ತಂಡ ಹಲ್ಲೆ ನಡೆಸಿದೆ. ರಶೀದ್, ಅಪ್ಸಲ್ ಎಂಬಿವರ ನೇತೃತ್ವದಲ್ಲಿರುವ ತಂಡ ಹಲ್ಲೆನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಗಸ್ತು ತಿರುಗುತ್ತಿದ್ದಾಗ ಹಿದಾಯತ್ ನಗರದಲ್ಲಿ ಜನರು ಗುಂಪುಗೂಡಿ ನಿಂತಿದ್ದರು. ಈ ಹೊತ್ತಿನಲ್ಲಿ ಗುಂಪುಗೂಡಿ ನಿಲ್ಲುವುದು ಸರಿಯಲ್ಲವೆಂದೂ ಕೂಡಲೇ ಇಲ್ಲಿಂದ ತೆರಳಬೇಕೆಂದು ಅವರಲ್ಲಿ ತಿಳಿಸಲಾಯಿತು. ಆದರೆ ತಂಡ ಅಲ್ಲಿಂದ ಮರಳದೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹಲ್ಲೆನಡೆಸಿರುವುದಾಗಿ ಪೊಲೀಸರು ದೂರಿದ್ದಾರೆ. ಕಾನೂನುವಿರುದ್ಧವಾಗಿ ಕಾರ್ಯಾಚರಿಸುತ್ತಿದ್ದ ಗೂಡಂಗಡಿಯನ್ನು ಪೊಲೀಸರು ಮುಚ್ಚುಗಡೆಗೊಳಿಸಲು ತಿಳಿಸಿದ್ದರು. ಇದರ ದ್ವೇಷದಿಂದ ಪೊಲೀಸರ ಮೇಲೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ.