ಎಡನೀರು ಶ್ರೀಗಳ ವಿರುದ್ಧ ಹಲ್ಲೆ ಯತ್ನ: ವಿ.ಹಿಂ.ಪ ಜಿಲ್ಲಾ ಸಮಿತಿ ಖಂಡನೆ

ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಂಚರಿಸುತ್ತಿದ್ದ ಕಾರನ್ನು ಕಿಡಿಗೇಡಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಖಂಡಿಸಿದೆ. ದುಷ್ಕರ್ಮಿ ಗಳನ್ನು ಕೂಡಲೇ ಬಂಧಿಸಿ ಇಂತಹ ವಿಕೃತ ಮನಸ್ಥಿತಿಯವರನ್ನು ಮಟ್ಟ ಹಾಕುವ ಕೆಲಸ ಮಾಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಬೋವಿಕ್ಕಾನ ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ವಾಹನದ ಮೇಲೆ ದುಷ್ಕರ್ಮಿಗಳು ಗುಂಪು ದಾಳಿ ನಡೆಸಿರುವುದು ಅಕ್ಷಮ್ಯ ಅಪರಾಧವೆಂದು ಅವರು ತಿಳಿಸಿದ್ದಾರೆ.

ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿದ ದಾಳಿಯಾಗಿದ್ದು, ಹಿಂದೂ ಸಮಾಜ ಇದನ್ನು ಒಟ್ಟಾಗಿ ಖಂಡಿಸಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟರು. ಈ ಪ್ರಕರಣದ ತನಿಖೆಯನ್ನು ತ್ವರಿತಗತಿ ಯಲ್ಲಿ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಜೊತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆ ಪೊಲೀಸರು ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ವಿಹಿಂಪದ ಪ್ರಾಂತ್ಯ ಸತ್ಸಂಗ ಸಹ ಸಂಯೋಜಕ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಿಲ್ಲಾ ಉಪಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ ಮಾವಿನಕಟ್ಟೆ, ಸುರೇಶ್ ಬಾಬು ಕಾನ ತ್ತೂರು, ಜಿಲ್ಲಾ ಧರ್ಮಪ್ರಸಾರ ಪ್ರಮುಖ ವಾಮನ ಆಚಾರ್ಯ ಬೋವಿಕ್ಕಾನ, ಜಿಲ್ಲಾ  ಧರ್ಮಾಚಾರ್ಯ ಪ್ರಮುಖ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಗ್ರಾಮಾಂತರ ಪ್ರಖಂಡ ಉಪಾಧ್ಯಕ್ಷ ಕೃಷ್ಣನ್ ಅಮ್ಮಂಗೋಡು ಮುಂತಾದವರು ಸ್ವಾಮೀಜಿಯವರನ್ನು ಭೇಟಿ ಮಾಡಿ  ಈ ಹೇಳಿಕೆ ನೀಡಿದ್ದಾರೆ.

You cannot copy contents of this page