ಎಸ್.ಐ, ಡ್ರೈವರ್‌ಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣ: ಆರೋಪಿಗೆ 16 ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಕರ್ತವ್ಯನಿರತ ಎಸ್‌ಐ ಮತ್ತು ಪೊಲೀಸ್ ಜೀಪ್ ಡ್ರೈವರನ್ನು ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (2)ದ ನ್ಯಾಯಾಧೀಶೆ ಪ್ರಿಯ ಕೆ. ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೧೬ ವರ್ಷ ಸಜೆ ಹಾಗೂ 90,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಾರಾ ಗ್ರಾಮದ ಮೀತ್ತಲ್ ಮಾಂಙಾಡ್ ಕುಳಿಕುನ್ನು ಕೆ.ಎಂ. ಹೌಸ್‌ನ ಅಹಮ್ಮದ್ ರಾಶೀದ್ ಕೆ.ಎಂ. (31) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೧೯ ಜನವರಿ ೧ರಂದು ಮುಂಜಾನೆ ೩ ಗಂಟೆಗೆ ಕಳನಾಡು ಗ್ರಾಮದ ಕಳನಾಡು ಎಂಬಲ್ಲಿ ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಎಸ್‌ಐ ಐ. ಜಯರಾಜನ್ ಮತ್ತು ಡ್ರೈವರ್ ಇಲ್‌ಸಾದ್ ಎಂಬವರನ್ನು ಕಲ್ಲು ಇತ್ಯಾದಿಗಳಿಂದ ಇರಿದು ಕೊಲೆಗೈಯ್ಯಲೆತ್ನಿಸಿದ ಹಾಗೂ ಪೊಲೀಸ್ ವಾಹನಕ್ಕೆ ಹಾನಿ ಉಂಟುಮಾಡಿದ ದೂರಿನಂತೆ ಅಹಮ್ಮದ್ ರಾಶೀದ್‌ನ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
ಅಂದು ಬೇಕಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ವಿ.ಕೆ. ವಿಶ್ವಂಭರನ್ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ನ್ಯಾಯಾಲಯದಲ್ಲಿ ವಾದಿಸಿದ್ದರು.