ಏಳಿಮಲೆ ನೌಕಾ ಅಕಾಡೆಮಿಗೆ ಅಕ್ರಮವಾಗಿ ಪ್ರವೇಶಿಸಲೆತ್ನ, ಕಾಶ್ಮೀರಿ ಯುವಕನ ಸೆರೆ

ಕಾಸರಗೋಡು: ಪಯ್ಯನ್ನೂರು ಬಳಿ ಇರುವ ಏಳಿಮಲೆ ನೌಕಾ ಅಕಾಡೆಮಿಯೊಳಗೆ ಅಕ್ರಮವಾಗಿ ಪ್ರವೇಶಿಸಲೆತ್ನಿಸಿದ ಕಾಶ್ಮೀರಿ  ಯುವಕನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದಾರೆ.

ಜಮ್ಮು-ಕಾಶ್ಮೀರ ಬಾರಾಮುಲ್ಲಾ ನಿವಾಸಿ ಮುಹಮ್ಮದ್ ಮುರ್ತಾಸ್ (೨೧) ಬಂಧಿತನಾದ ಯುವಕ. ಈತ ಮಧ್ಯಾಹ್ನ ೧೨ ಗಂಟೆ ವೇಳೆ ನೌಕಾ ಅಕಾಡೆಮಿಯ ಗೇಟ್‌ನ ಬಳಿ ಬಂದು ಅಕ್ರಮವಾಗಿ ಒಳಗೆ ಪ್ರವೇಶಿಸಲೆತ್ನಿಸಿದ್ದಾನೆ. ಅದನ್ನು ಕಂಡ ಅಲ್ಲಿನ  ಭದ್ರತಾ ಸಿಬ್ಬಂದಿಗಳು ಆ ಯತ್ನವನ್ನು ತಡೆದು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಪಯ್ಯನ್ನೂರು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿ ಠಾಣೆಗೆ ಒಯ್ದರು. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಆತ ತದ್ವಿರುದ್ಧ ಹೇಳಿಕೆ ನೀಡಿದ್ದು, ಅದು  ತೀವ್ರ ಶಂಕೆಗೂ ದಾರಿ ಮಾಡಿ ಕೊಟ್ಟಿದೆ. ಬಳಿಕ ಆತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬಂಧಿತನನ್ನು ಅಗತ್ಯವಿದ್ದಲ್ಲಿ ಮತ್ತೆ ತಮ್ಮ ಕಸ್ಟಡಿಗೆ ಪಡೆದು ಇನ್ನಷ್ಟು ತೀವ್ರ ವಿಚಾರಣೆಗೊಳಪಡಿ ಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಭಾರತೀಯ ನೌಕಾ ಪಡೆ, ಭದ್ರತಾ ತಂಡ, ಕೇಂದ್ರ ಮತ್ತು ರಾಜ್ಯ ಗುಪ್ತಚರ ವಿಭಾಗದವರೂ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕ ತನಿಖೆಯಲ್ಲಿ ತೊಡಗಿದ್ದಾರೆ. ಬಂಧಿತನು ನೌಕಾ ಪಡೆಯೊಳಗೆ ಪ್ರವೇಶಿಸಲೆತ್ನಿಸಿದ ಹಿನ್ನೆಲೆ ಮತ್ತು ಆತ ಯಾವುದಾದರೂ ಉಗ್ರಗಾಮಿ ಸಂಘಟನೆಗೆ ಸೇರಿದವನಾಗಿದ್ದಾನೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಏಳಿಮಲೆ ನೌಕಾ ಅಕಾಡೆಮಿ ಮೇಲೆ ದಾಳಿ ನಡೆಸುವ ಬೆದರಿಕೆಯೂ ಈ ಹಿಂದೆ ಉಂಟಾಗಿತ್ತು.

RELATED NEWS

You cannot copy contents of this page