ಒಂದು ರಾಷ್ಟ್ರ ಒಂದು ಚುನಾವಣೆ : 32 ರಾಜಕೀಯ ಪಕ್ಷಗಳ ಬೆಂಬಲ; ಕಾಂಗ್ರೆಸ್ ಸೇರಿ 15 ಪಕ್ಷಗಳ ವಿರೋಧ
ನವದೆಹಲಿ: ಕೇಂದ್ರ ಸರಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಗೆ ೩೨ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು, ಕಾಂಗ್ರೆಸ್ ಸೇರಿದಂತೆ 15 ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷರಾಗಿರುವ ಉನ್ನತ ಮಟ್ಟದ ಸಮಿತಿ 62 ರಾಜಕೀಯ ಪಕ್ಷಗಳ ಅಭಿಪ್ರಾಯಗಳು ಕೇಳಿತ್ತು. ಅದರಲ್ಲಿ 47 ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದು, ಅದರಲ್ಲಿ ೩೨ ಪಕ್ಷಗಳು ಕೇಂದ್ರ ಸರಕಾರದ ತೀರ್ಮಾನವನ್ನು ಸ್ವಾಗತಿಸಿವೆ. ಮಾತ್ರವಲ್ಲ ಏಕಕಾಲ ಚುನಾವಣೆ ನಡೆಸಿದಲ್ಲಿ ಅದರಿಂದ ದೇಶಕ್ಕೆ ಭಾರೀ ಆರ್ಥಿಕ ಉಳಿತಾಯ ಉಂಟಾಗಲಿದೆ ಮಾತ್ರವಲ್ಲ ಸಾಮಾ ಜಿಕ ಸಾಮರಸ್ಯ ಹಾಗೂ ಆರ್ಥಿಕ ಬೆಳವಣಿಗೆಗೂ ದಾರಿ ಮಾಡಿಕೊಡ ಲಿದೆಯೆಂದು ಹೇಳಿದೆ.
ಇನ್ನು ಕಾಂಗ್ರೆಸ್, ಆಮ್‌ಆದ್ಮಿ ಪಾರ್ಟಿ, ಬಿಎಸ್‌ಪಿ, ಸಿಪಿಎಂ ಮತ್ತು ಇತರ ಎಡಪಕ್ಷಗಳು ಸೇರಿದಂತೆ 15 ರಾಜಕೀಯ ಪಕ್ಷಗಳು ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿವೆ. ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ದೇಶದ ಸಂವಿಧಾನದ ಮೂಲರಚನೆಯ ಉಲ್ಲಂಘನೆಯಾಗಲಿದೆ. ಇದು ಪ್ರಜಾತಂತ್ರ ಹಾಗೂ ಫೆಡರಲ್ ವ್ಯವಸ್ಥೆಯ ವಿರೋಧಿ ಕ್ರಮವಾಗಲಿದೆ. ಪ್ರಾದೇಶಿಕ ಪಕ್ಷಗಳ ಪ್ರಭಾವವನ್ನು ತಗ್ಗಿಸುವಂತೆ ಮಾಡಲಿದೆ ಮಾತ್ರವಲ್ಲ ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ಭಾರೀ ಹಿಡಿತ ಸಾಧಿಸುವಂತೆ ದಾರಿ ಮಾಡಿಕೊಡಲಿದೆ. ಮಾತ್ರವಲ್ಲ ರಾಷ್ಟ್ರಪತಿ ಆಳ್ವಿಕೆ ಮಾದರಿಯ ಸರಕಾರ ರಚನೆಗೆ ದಾರಿ ಮಾಡಿಕೊಡಲಿದೆಯೆಂದು ಈ ಪರಿಕಲ್ಪನೆಯನ್ನು ವಿರೋಧಿಸಿದ ರಾಜಕೀಯ ಪಕ್ಷಗಳು ಹೇಳಿವೆ.