ತಿರುವನಂತಪುರ: ಶಿಕ್ಷಣ ಕ್ಯಾಲೆಂಡರ್ ಪರಿಷ್ಕರಣೆ ತಜ್ಞ ಸಮಿತಿಯ ಶಿಫಾರಸು ಅಂಗೀಕರಿಸಿದರೆ ಶಾಲೆಗಳಲ್ಲಿ ಇನ್ನು ಎಲ್ಲಾ ತಿಂಗಳೂ ಕ್ಲಾಸ್ ಪರೀಕ್ಷೆ ಉಂಟಾಗಲಿದೆ. ಓಣಂ ಹಬ್ಬದ ವೇಳೆ ಕಾಲು ವಾರ್ಷಿಕ ಪರೀಕ್ಷೆ, ಕ್ರಿಸ್ಮಸ್ ವೇಳೆ ಅರ್ಧ ವಾರ್ಷಿಕ ಪರೀಕ್ಷೆ, ಮಾರ್ಚ್ನಲ್ಲಿ ವಾರ್ಷಿಕ ಪರೀಕ್ಷೆ ಎಂಬೀ ರೀತಿಯ ಮೂರು ಪರೀಕ್ಷೆಗಳು ಪ್ರಸ್ತುತ ಇದೆ. ಇದಕ್ಕೆ ಬದಲಾಗಿ ಅಕ್ಟೋಬರ್ನಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ಹಾಗೂ ಮಾರ್ಚ್ನಲ್ಲಿ ವಾರ್ಷಿಕ ಪರೀಕ್ಷೆ ಎಂಬೀ ರೀತಿಯಲ್ಲಿ ಎರಡು ಪರೀಕ್ಷೆಗೆ ಸೀಮಿತಗೊಳಿಸಲು ಶಿಫಾರಸು ಮಾಡಲಾಗಿದೆ. ಪರೀಕ್ಷೆ ಸಂದರ್ಭದಲ್ಲಿ ತರಗತಿಗಳು ಮೊಟಕಾಗುವುದನ್ನು ತಪ್ಪಿಸಲು ಈ ಶಿಫಾರಸು ಮಾಡಲಾಗಿದೆ.
ಪರೀಕ್ಷೆಯ ಹೊರತಾಗಿ ವಿದ್ಯಾರ್ಥಿಯನ್ನು ಸಮಗ್ರವಾಗಿ ವಿಶ್ಲೇಷಿಸುವ ಮೌಲ್ಯ ನಿರ್ಣಯಕ್ಕೆ ಪ್ರಾಮುಖ್ಯತೆ ನೀಡಲು ಹೊಸ ಪಠ್ಯ ಯೋಜನೆಯ ರೂಪುರೇಶೆಯಲ್ಲಿ ನಿರ್ದೇಶಿಸಲಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲಾ ತಿಂಗಳೂ ಕ್ಲಾಸ್ ಪರೀಕ್ಷೆ ನಡೆಸಿ ಅಧ್ಯಯನ ಗುಣಮಟ್ಟ ಖಚಿತಪಡಿಸಲಾಗುವುದು. ಎಸ್ಸಿಇಆರ್ಟಿ ಸಿದ್ಧಪಡಿಸುವ ಪ್ರಶ್ನೆ ಬ್ಯಾಂಕ್ನಿಂದಿರುವ ಪ್ರಶ್ನೆ ಉಪ ಯೋಗಿಸಿ ಪರೀಕ್ಷೆ ನಡೆಸಲಾಗುವುದು.
ಅರ್ಧ ವಾರ್ಷಿಕ ಪರೀಕ್ಷೆ ನಡೆಯುವ ಅಕ್ಟೋಬರ್ನಲ್ಲೂ ವಾರ್ಷಿಕ ಪರೀಕ್ಷೆ ಇರುವ ಮಾರ್ಚ್ ತಿಂಗಳು ಹೊರತುಪಡಿಸಿ ವರ್ಷದಲ್ಲಿ ಎಂಟು ತಿಂಗಳು ಕ್ಲಾಸ್ ಪರೀಕ್ಷೆ ಇರಲಿದೆ. ಇದರಂತೆ ವರ್ಷದಲ್ಲಿ 10 ಪರೀಕ್ಷೆ ನಡೆಯಲಿದೆ.
ಇತ್ತೀಚೆಗೆ ಶನಿವಾರವನ್ನು ಕೆಲಸದ ದಿನವೆಂದು ಗುರುತಿಸಿದ ಶಿಕ್ಷಣ ಕ್ಯಾಲೆಂಡರ್ ವಿವಾದವಾದಾಗ ನ್ಯಾಯಾಲಯ ಮಧ್ಯೆ ಪ್ರವೇಶಿಸಿತ್ತು. ವಿಪಕ್ಷ ಸಂಘಟನೆಗಳ ಅರ್ಜಿ ಹಿನ್ನೆಲೆ ಯಲ್ಲಿ ಹೈಕೋರ್ಟ್ ಶನಿವಾರದ ಕೆಲಸದ ದಿನವೆಂಬ ಶಿಫಾರಸು ರದ್ದುಗೊಳಿಸಿತ್ತು. ಜೊತೆಗೆ ನಿಶ್ಚಿತ ತರಗತಿ ದಿನಗಳನ್ನು ಖಚಿತಪಡಿಸಲು ಶಿಕ್ಷಣ ಕ್ಯಾಲೆಂಡರ್ ಸಿದ್ಧಪಡಿಸಲು ಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆ ಯಲ್ಲಿ ಸರಕಾರ ತಜ್ಞಸಮಿತಿಯನ್ನು ರೂಪೀಕರಿಸಿತ್ತು. ಅಧ್ಯಾಪಕರ ಅಭಿಪ್ರಾಯದಂತೆ ಶನಿವಾರ ಕೆಲಸ ದಿನ ಬೇಡವೆಂದೂ, ಬದಲಾಗಿ ಹೈಸ್ಕೂಲ್ ತರಗತಿ ಸಮಯ ಅರ್ಧ ಗಂಟೆ ಹೆಚ್ಚಿಸುವುದೂ ಮೊದಲಾದ ನಿರ್ದೇಶಗಳನ್ನು ಸಮಿತಿ ನೀಡಿದೆ.