ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ವೇದಿಕೇತರ ಸ್ಪರ್ಧೆಯ ಮೊದಲ ದಿನ ಹೊಸದುರ್ಗ ಉಪಜಿಲ್ಲೆಗೆ ಮುನ್ನಡೆ
ಮುಳ್ಳೇರಿಯ: ಉತ್ಸವ ಛಾಯೆಯಲ್ಲಿರುವ ಕಾರಡ್ಕ ಗ್ರಾಮದಲ್ಲಿ ನಾಳೆ ಗೆಜ್ಜೆನಾದ ಅನುರಣಿಸಲಿದೆ. ನಿನ್ನೆ ಹಾಗೂ ಇಂದು ವೇದಿಕೇತರ ಸ್ಪರ್ಧೆಗಳು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ನಡೆದಿದ್ದು, ನಾಳೆಯಿಂದ ವೇದಿಕೆಗಳ ಪರದೆ ಮೇಲೇರಲಿದೆ. ಕಾರಡ್ಕ ಗ್ರಾಮವೇ ಈಗ ಕಾರಡ್ಕ ಶಾಲೆಯ ಮೈದಾನದಲ್ಲಿ ಸುತ್ತಾಡುತ್ತಿದ್ದು, ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಗೊಳಿಸಲು ಸಕಲರು ತಮ್ಮಿಂದಾಗುವ ಸೇವೆಗೈಯ್ಯುತ್ತಿದ್ದಾರೆ.
ನಿನ್ನೆ ಕಥೆರಚನೆ, ಕವಿತೆ ರಚನೆ, ಚಿತ್ರ ರಚನೆ, ಕಾರ್ಟುನ್, ಕೊಲೇಶ್, ಬ್ಯಾಂಡ್‌ಮೇಳ ಮೊದಲಾದ ಸ್ಪರ್ಧೆಗಳು ನಡೆಯಿತು.
ನಿನ್ನೆ ನಡೆದ ಸ್ಪರ್ಧೆಗಳಲ್ಲಿ ೮೮ ಅಂಕ ಪಡೆದ ಹೊಸದುರ್ಗ ಉಪಜಿಲ್ಲೆ ಮುನ್ನಡೆಯಲ್ಲಿದೆ. ೮೬ ಅಂಕ ಪಡೆದ ಕುಂಬಳೆ ಉಪಜಿಲ್ಲೆ ದ್ವಿತೀಯ ಸ್ಥಾನ, ೮೫ರಂತೆ ಅಂಕ ಪಡೆದ ಕಾಸರಗೋಡು, ಚಿತ್ತಾರಿಕ್ಕಲ್ ಉಪಜಿಲ್ಲೆಗಳು ತೃತೀಯ ಸ್ಥಾನದಲ್ಲಿದೆ. ಶಾಲಾ ಮಟ್ಟದಲ್ಲಿ ೩೨ ಅಂಕ ಪಡೆದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಮುಂದಿದೆ. ೨೭ ಅಂಕ ಪಡೆದ ಪೈವಳಿಕೆ ನಗರಶಾಲೆ, ೨೩ ಅಂಕದೊಂದಿಗೆ ತೋಮಾಪುರಂ ಸೈಂಟ್ ತೋಮಸ್ ಹೈಯರ್ ಸೆಕೆಂಡರಿ ಶಾಲೆ ಯಥಾಕ್ರಮ ದ್ವಿತೀಯ, ತೃತೀಯ ಸ್ಥಾನ ಪಡೆದಿದೆ.
ಹೈಸ್ಕೂಲ್ ವಿಭಾಗ ಕಥಾರಚನೆ (ಮಲೆಯಾಳ)ಯಲ್ಲಿ ಕಾರಡ್ಕ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಎನ್.ವಿ. ಸಂಜನ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕವಿತೆ ರಚನೆಯಲ್ಲಿ (ಹೈಸ್ಕೂಲ್- ಮಲೆಯಾಳ) ಕುಂಡಂಗುಳಿ ಶಾಲೆಯ ಮನಾಸೆ ಕುರ್ಯನ್, ಮಲಯಾಳ ಉಪನ್ಯಾಸದಲ್ಲಿ ಮುಳ್ಳೇರಿಯ ಶಾಲೆಯ ಎಂ.ಎ. ಅಭಿಮನ್ಯು ಪ್ರಥಮ ಸ್ಥಾನ ಪಡೆದಿದ್ದಾರೆ. ಹೈಯರ್ ಸೆಕೆಂಡರಿ ವಿಭಾಗ ಕವಿತೆ ರಚನೆಯಲ್ಲಿ ಬಲ್ಲಾ ಈಸ್ಟ್ ಶಾಲೆಯ ಸಿನಾಶ್ ಶ್ರೀ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾನೆ. ಯುಪಿ ವಿಭಾಗ ಕಥಾ ರಚನೆ (ಮಲೆಯಾಳ) ಪ್ರಥಮ ಸ್ಥಾನ ಆಯಿಷತ್ ಹಾಷಿದ, ಕವಿತೆ ರಚನೆಯಲ್ಲಿ ಪ್ರಥಮ ಸ್ಥಾನ ಆಯಿಷತ್ ಅಸ್ನ ಪಡೆದಿದ್ದು, ಇವರಿಬ್ಬರೂ ಪೈವಳಿಕೆ ಅಲ್ ಮದೀನ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಬ್ಯಾಂಡ್ ಮೇಳದಲ್ಲಿ ತೋಮಾಪುರ ಶಾಲೆಯ ರೋಹಿತ್ ತಂಡ ಪ್ರಥಮ ಸ್ಥಾನ ಗಳಿಸಿದೆ. ಹೈಯರ್ ಸೆಕೆಂಡರಿ ವಿಭಾಗ ಕಾರ್ಟೂನ್ ಸ್ಪರ್ಧೆಯಲ್ಲಿ ಉದುಮ ಶಾಲೆಯ ತರುಣ್ ಪ್ರಕಾಶ್ ಪ್ರಥಮ ಸ್ಥಾನ ಪಡೆದಿದ್ದು, ಹೈಸ್ಕೂಲ್ ವಿಭಾಗದಲ್ಲಿ ತಚ್ಚಂಗಾಡ್ ಶಾಲೆಯ ಕೆ.ವಿ. ಅಭಿರಾಮಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಇಂದು ಸಂಸ್ಕೃತ, ಅರಬಿ, ಮಲಯಾಳ ಕವಿತಾ ರಚನೆ ಸಹಿತ ವಿವಿಧ ಸ್ಪರ್ಧೆಗಳು ನಡೆಯಲಿದೆ.