ಕರುವನ್ನೂರು ಬ್ಯಾಂಕ್ ವಂಚನೆ: ಮಾಜಿ ಸಚಿವ ಎ.ಸಿ. ಮೊಯ್ದೀನ್ಗೆ ಇ.ಡಿ. ನೋಟೀಸ್
ಕೊಚ್ಚಿ: ಕರುವನ್ನೂರು ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ, ಶಾಸಕನಾದ ಎ.ಸಿ. ಮೊಯ್ದೀನ್ಗೆ ಇ.ಡಿ. ನೋಟೀಸು ಜ್ಯಾರಿಗೊಳಿಸಿದೆ. ಈ ತಿಂಗಳ ೩೧ರಂದು ಬೆಳಿಗ್ಗೆ ೧೧ಕ್ಕೆ ಕೊಚ್ಚಿಯ ಇ.ಡಿ. ಕಚೇರಿಯಲ್ಲಿ ಹಾಜರಾಗುವಂತೆ ನೋಟೀಸ್ನಲ್ಲಿ ತಿಳಿಸಲಾಗಿದೆ. ಬೇನಾಮಿ ಸಾಲ ವ್ಯವಹಾರ ಸಹಿತ ವಿಷಯಗಳಲ್ಲಿ ತನಿಖೆಯ ಅಂಗವಾಗಿ ಇ.ಡಿ. ಎ.ಸಿ. ಮೊಯ್ದೀನ್ರಿಂದ ಹೇಳಿಕೆ ದಾಖಲಿಸಲಿದೆ. ಬೇನಾಮಿ ವ್ಯವಹಾರದಲ್ಲಿ ಭಾಗಿಯಾದ ವರಿಗೂ ಇ.ಡಿ. ನೋಟೀಸ್ ಕಳುಹಿಸಿದೆ. ಜನಸಾಮಾನ್ಯರ ಭೂಮಿಯನ್ನು ಅವರು ತಿಳಿಯದೆ ಅಡವಿರಿಸಿ ಬೇನಾಮಿಗಳು ಸಾಲ ಪಡೆದು ವಂಚಿಸಿದ್ದಾರೆಂದು ಇ.ಡಿ. ತಿಳಿಸಿದೆ. ೬ ಕಡೆಗಳಲ್ಲಿ ನಡೆದ ದಾಳಿಯಲ್ಲಿ ೧೫ ಕೋಟಿ ರೂಪಾಯಿಗಳ ಸೊತ್ತುಗಳನ್ನು ಮುಟ್ಟು ಗೋಲು ಹಾಕಿರುವುದಾಗಿ ಇ.ಡಿ. ತಿಳಿಸಿದೆ. ಕರುವನ್ನೂರು ಬ್ಯಾಂಕ್ನಲ್ಲಿ ನಡೆದ ೧೫೦ ಕೋಟಿ ರೂಪಾಯಿಗಳ ವಂಚನೆಗೆ ರಾಜಕೀಯ ಪಕ್ಷವೊಂದರ ಜಿಲ್ಲಾ ನೇತಾರರು ಸಹಾಯವೊದಗಿಸಿದ್ದಾರೆಂದು .ಡಿ. ತಿಳಿಸಿದೆ. ನೇತಾರರ ನಿರ್ದೇಶ ಮೇರೆಗೆ ಬೇನಾಮಿಗಳು ಸೊತ್ತುಗಳನ್ನು ಅಡವಿರಿಸಿ ಕೋಟ್ಯಂತರ ರೂಪಾಯಿ ಸಾಲ ತೆಗೆದಿದ್ದಾರೆ. ಒಂದೇ ಭೂಮಿಯನ್ನು ಅಡವಿರಿಸಿ ಒಂದಕ್ಕಿಂತ ಹೆಚ್ಚು ಬಾರಿ ಸಾಲ ಪಡೆಯಲಾಗಿದೆ. ಬೇನಾಮಿಗಳೆಂದು ಸಂಶಯಿಸುವ ಪಿ.ಪಿ. ಕಿರಣ್, ಸಿ.ಎಂ. ರಹೀಂ, ಎಂ.ಕೆ. ಶಿಜು, ಸತೀಶ್ ಕುಮಾರ್ ಎಂಬಿವರ ಸಹಿತ ಹಲವರ ಮನೆಗಳಿಗೆ ನಡೆದ ದಾಳಿಯಲ್ಲಿ ೧೫ ಕೋಟಿ ರೂಪಾಯಿ ಮೌಲ್ಯದ ೩೬ ಸೊತ್ತುಗಳನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಲಾಗಿದೆ.