ಕಾಞಂಗಾಡ್‌ನಲ್ಲಿ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ: ಆರೋಪಿಗಾಗಿ ಕೊಡಗಿನಲ್ಲಿ ಶೋಧ
ಕಾಸರಗೋಡು: ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಬಳಿಕ ಚಿನ್ನದ ಬೆಂಡೋಲೆ ಕಸಿದು ಪರಾರಿಯಾದ ಆರೋಪಿಯ ಗುರುತು ಪತ್ತೆಹಚ್ಚಲಾಗಿದೆ.
ಕರ್ನಾಟಕದ ಕೊಡಗು ನಿವಾಸಿಯಾದ 33ರ ಹರೆಯದ ಯುವಕ ಈ ಕೃತ್ಯವೆಸಗಿರುವುದಾಗಿ ದೃಢೀಕರಿಸಲಾಗಿದೆಯೆಂದು ಪೊಲೀಸ್ ಮೂಲ ಗಳು ತಿಳಿಸಿವೆ. ಆರೋಪಿಗೂ ಘಟನೆ ಸ್ಥಳಕ್ಕೂ ಹತ್ತಿರದ ನಂಟಿದೆಯೆಂದು ತಿಳಿದುಬಂದಿದೆ.
ಕಳೆದ ಬುಧವಾರ ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಅಜ್ಜ ಹಸುವಿನ ಹಾಲು ಕರೆಯಲು ತೆರಳಿದ್ದ ವೇಳೆ ಮನೆಯ ಮುಂಭಾಗದ ಬಾಗಿಲು ಮೂಲಕ ಒಳನುಗ್ಗಿದ ದುಷ್ಕರ್ಮಿ ಬಾಲಕಿಯನ್ನು ಎತ್ತಿಕೊಂಡು ಅಡುಗೆ ಕೋಣೆ ಭಾಗದ ಬಾಗಿಲು ಮೂಲಕ ಪರಾರಿಯಾಗಿದ್ದನು. ಮನೆಯಿಂದ 400 ಮೀಟರ್ ದೂರದ ಬಯಲು ಪ್ರದೇಶಕ್ಕೆ ತಲುಪಿಸಿ ದೌರ್ಜನ್ಯಗೈದ ಬಳಿಕ ಆಕೆಯ ಚಿನ್ನದ ಬೆಂಡೋಲೆ ತೆಗೆದು ಆರೋಪಿ ಪರಾರಿಯಾಗಿದ್ದನು. ಸಮೀಪದ ಮನೆಗೆ ತಲುಪಿದ ಬಾಲಕಿ ವಿಷಯ ತಿಳಿಸಿದ್ದಳು. ಕಣ್ಣೂರು ಡಿಐಜಿ ಥೋಮ್ಸನ್ ಜೋಸ್, ಜಿಲ್ಲಾ ಪೊಲೀಸ್ ಅಧಿಕಾರಿ ಪಿ. ಬಿಜೋಯ್‌ರವರ ಮೇಲ್ನೋಟದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಿ ಹಗಲು-ರಾತ್ರಿ ನಡೆಸಿದ ತನಿಖೆಯಲ್ಲಿ ಆರೋಪಿಯ ಗುರುತು ಹಚ್ಚಲಾಗಿದೆ. ಘಟನೆ ನಡೆದ ದಿನ ಬೆಳಿಗ್ಗೆ ಓರ್ವ ಬ್ಯಾಗ್ ಹಿಡಿದುಕೊಂಡು ನಡೆದು ಹೋಗುತ್ತಿರುವುದು ಕಂಡುಬಂದಿರುವುದಾಗಿ ಆ ಪ್ರದೇಶದ ಒಬ್ಬರು ತಿಳಿಸಿದ್ದಾರೆ. ಇದರ ಪ್ರಕಾರ ತನಿಖೆ ಮುಂದುವರಿಸಿದಾಗ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿದೆ. ವ್ಯಕ್ತಿ ನಡೆದು ಹೋಗಿರುವುದಾಗಿ ಕಂಡುಬಂದ ಸ್ಥಳದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯೆಂದು ಹೇಳಲಾಗುವ ವ್ಯಕ್ತಿಯ ಚಿತ್ರ ಕಂಡುಬಂದಿದೆ. ಇದರಿಂದ ಕೂಡಲೇ ಪೊಲೀಸ್ ತಂಡ ಕೊಡಗಿಗೆ ತೆರಳಿ ಆರೋಪಿಯ ಮನೆಯಲ್ಲಿ ತಪಾಸಣೆ ನಡೆಸಿದೆ. ಪೊಲೀಸರು ಹುಡುಕುತ್ತಿರುವ ವ್ಯಕ್ತಿ ತಲುಪಿಲ್ಲವೆಂದು ಈ ವೇಳೆ ಮನೆಯವರು ತಿಳಿಸಿದ್ದಾರೆ. ತನ್ನನ್ನು ಹುಡುಕಿ ಪೊಲೀಸರು ಬರಲು ಸಾಧ್ಯತೆ ಇದೆಯೆಂದು ತಿಳಿದ ಆರೋಪಿ ಬೇರೆಲ್ಲಿಗಾದರೂ ಪರಾರಿಯಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಆದರೂ ಆರೋಪಿ ಯನ್ನು ಶೀಘ್ರ ಪತ್ತೆಹಚ್ಚಲು ಸಾಧ್ಯವಿದೆಯೆಂದು ಡಿವೈಎಸ್ಪಿಗಳಾದ ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ. ಸುನಿಲ್ ಕುಮಾರ್, ವಿ. ರತೀಶ್, ಇನ್‌ಸ್ಪೆಕ್ಟರ್ ಎಂ.ಪಿ. ಅಸಾದ್ ಎಂಬಿವರನ್ನೊಳ ಗೊಂಡ ತಂಡ ವಿಶ್ವಾಸ ವ್ಯಕ್ತಪಡಿಸಿದೆ.