ಕಾಟುಕುಕ್ಕೆಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹ ಸುಟ್ಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಪೆರ್ಲ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಎಣ್ಮಕಜೆ ಕಾಟುಕುಕ್ಕೆ ಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹವನ್ನು ಸುಟ್ಟ ಪ್ರಕರಣದಲ್ಲಿ ಸೆರೆಯಾಗಿ ಜಾಮೀನಿನಲ್ಲಿ ಬಿಡುಗಡೆ ಗೊಂಡು ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆಯಾಗಿದ್ದಾನೆ. ಛತ್ತೀಸ್‌ಘಡ್, ನಾರಾಯಣ್‌ಪುರ್ ನಿವಾಸಿ ದೀಪಕ್ ಕುಮಾರ್ ಸಲಾಂ (32)ನನ್ನು ತಮಿಳು ನಾಡು ಈರೋಡ್‌ನಿಂದ ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ಸ್‌ಪೆಕ್ಟರ್‌ರ ನಿರ್ದೇಶ ಪ್ರಕಾರ ಸಿಪಿಒಗಳಾದ ಗೋಕುಲ್, ಹಾರಿಫ್, ಶ್ರೀನೇಶ್ ಎಂಬಿವರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
2017 ಡಿಸೆಂಬರ್ 30ರಂದು ಕಾಟುಕುಕ್ಕೆಯ ಬಾಲಗೋಪಾಲ ಕೃಷ್ಣ ಭಟ್‌ರ ಹಿತ್ತಿಲಿನಲ್ಲಿ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಕಂಡು ಬಂದಿತ್ತು. ಗುರುತು ಹಿಡಿಯಲು ಸಾಧ್ಯ ವಾಗದ ಸ್ಥಿತಿಯಲ್ಲಿ ಈ ಮೃತದೇಹವಿತ್ತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಕೃತ್ಯವೆಂದು ಪತ್ತೆಹಚ್ಚಲಾಗಿತ್ತು. ಬದಿಯಡ್ಕ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆಗೀಡಾಗಿರುವುದು ಕರ್ನಾಟಕ ಗದಗ ನಿವಾಸಿ ದೇವಪ್ಪ ಅಜಿ ಎಂಬವರ ಪುತ್ರ ಶರಣದಾಸಪ್ಪ ಅಜಿ (28) ಎಂದು ಪತ್ತೆಮಾಡಲಾಗಿತ್ತು. ಇವರು ವಾಸಿಸಿದ್ದ ಕ್ವಾರ್ಟರ್ಸ್‌ನಲ್ಲಿಯೇ ವಾಸಿಸುತ್ತಿದ್ದ ದೀಪಕ್ ಕುಮಾರ್ ಸಲಾಂ, ಮಧ್ಯ ಪ್ರದೇಶ ನಿವಾಸಿ ಗಿರ್ವಾರ್ ಸಿಂಗ್ (30) ಎಂಬಿವರಾಗಿದ್ದಾರೆ ಕೊಲೆಗೈದಿರು ವುದೆಂದು ಪತ್ತೆಮಾಡಲಾಗಿತ್ತು. ಇವರಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಹೊರಬಂದ ದೀಪಕ್ ಕುಮಾರ್ ಸಲಾಂ ತಲೆಮರೆಸಿಕೊಂಡಿದ್ದನು. ಹಲವು ಬಾರಿ ವಾರಂಟ್ ಕಳುಹಿಸಿಯೂ ಈತ ನ್ಯಾಯಾಲಯದಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿಯಾಗಿ ಘೋಷಿಸಲಾಗಿತ್ತು.