ಕಾರಡ್ಕ ಬಳಿ ಚಿರತೆ ದಾಳಿಯಿಂದ ಸಾಕು ನಾಯಿಗೆ ಗಂಭೀರ ಗಾಯ: ನಾಡಿನಲ್ಲಿ ಆತಂಕ

ಮುಳ್ಳೇರಿಯ:  ಕಾರಡ್ಕ ಬಳಿ ಕೊಟ್ಟಂಗುಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದೆ. ಅಲ್ಲಿನ ರಾಮಕೃಷ್ಣನ್ ಎಂಬವರ ಮನೆ ಅಂಗಳಕ್ಕೆ ನಿನ್ನೆ ರಾತ್ರಿ 12.30ರ ವೇಳೆ ಚಿರತೆ ತಲುಪಿರುವುದಾಗಿ ತಿಳಿದುಬಂ ದಿದೆ. ಅಲ್ಲಿನ ಸಾಕು ನಾಯಿ ಬೊಗಳುವುದನ್ನು ಕೇಳಿ ಮನೆಯವರು ಎಚ್ಚೆತ್ತು ಬೆಳಕು ಹಾಯಿಸಿದಾಗ  ನಾಯಿ ಮೇಲೆ ಚಿರತೆ ದಾಳಿ ನಡೆಸುವುದು ಕಂಡುಬಂದಿದೆ ಯೆಂದು ಮನೆಯೊಡೆಯ ರಾಮಕೃಷ್ಣನ್ ತಿಳಿಸಿದ್ದಾರೆ. ನಾಯಿಯ ಕುತ್ತಿಗೆಗೆ ಚಿರತೆ ಕಡಿದು ಗಂಭೀರ ಗಾಯಗೊಳಿಸಿದೆ.  ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತು ಕಂಡುಬಂದಿದ್ದು, ಕುತ್ತಿಗೆ ಊದಿಕೊಂಡಿದೆ ಎಂದು ರಾಮಕೃಷ್ಣನ್ ತಿಳಿಸಿದ್ದಾರೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ತಿಂಗಳುಗಳ ಹಿಂದೆಯಷ್ಟೇ ಕೊಟ್ಟಂಗುಳಿ ಹಾಗೂ ಪರಿಸರ ಪ್ರದೇಶಗಳಲ್ಲಿ ಎರಡು ಬಾರಿ ಚಿರತೆ ಕಂಡುಬಂದಿತ್ತು. ಒಯಕ್ಕೋ ಲ್‌ನ ವಿನೋದ್, ಗೋಪಾಲನ್ ಎಂಬಿವರ ಮನೆಯಂಗಳದಲ್ಲಿ ಚಿರತೆ ಕಂಡುಬಂದಿರುವುದಾಗಿ ತಿಳಿಸಲಾಗಿತ್ತು. ಮುಳಿಯಾರು ಮೀಸಲು ಅರಣ್ಯ ಸಮೀಪದ ಜನವಾಸ ಕೇಂದ್ರಗಳಲ್ಲಿ  ಚಿರತೆ ಪದೇ ಪದೇ ಕಂಡುಬರುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧೆಡೆಗಳಲ್ಲಿ ಸ್ಥಾಪಿಸಿದ ಸಿಸಿ ಟಿವಿಗಳಲ್ಲಿ ಚಿರತೆಯ ದೃಶ್ಯ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ  ಗೂಡು  ಸ್ಥಾಪಿಸಿ ಚಿರತೆಯನ್ನು ಹಿಡಿಯಲಿರುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.   ಆದ್ದರಿಂದ ತಜ್ಞರ ನಿರ್ದೇಶ ಪ್ರಕಾರ ಪಟಾಕಿ ಸಿಡಿಸಿ, ಚೆಂಡೆ ಬಾರಿಸಿ ಚಿರತೆಯನ್ನು ಅರಣ್ಯದತ್ತ ಓಡಿಸಲು ಪ್ರಯತ್ನ ನಡೆಸಲಾಗಿತ್ತು.

RELATED NEWS

You cannot copy contents of this page