ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಸೆಕ್ರೆಟರಿ ರತೀಶನ್‌ನನ್ನು ಇಂದು ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.78 ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದ ಆರೋಪಿಗಳಲ್ಲೋರ್ವನಾದ ಸೊಸೈಟಿಯ ಸೆಕ್ರೆಟರಿ ಕರ್ಮಂತ್ತೋಡಿ ಬಾಳಕಂಡದ ಕೆ. ರತೀಶನ್‌ನನ್ನು ಜಿಲ್ಲಾ ಕ್ರೈಂ ಬ್ರಾಂಚ್ ಇಂದು ಮುಳ್ಳೇರಿಯದಲ್ಲಿರುವ ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಿದೆ. ಈಗಾಗಲೇ ಸೆರೆಗೀಡಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕೆ. ರತೀಶನ್, ಕಣ್ಣೂರು ಸಿಟಿ ಉರುವಚ್ಚಾಲ್ ನಿವಾಸಿಯೂ ಪಯ್ಯನ್ನೂರಿನಲ್ಲಿ ವಾಸಿಸುವ ಅಬ್ದುಲ್ ಜಬ್ಬಾರ್, ಕಲ್ಲಿಕೋಟೆ ಅರಕ್ಕಿಣರ್ ನಿವಾಸಿ ಸಿ. ನಬೀಲ್ ಎಂಬಿವರನ್ನು ಮೂರು ದಿನಗಳ ಕಸ್ಟಡಿಗೆ ಬಿಟ್ಟುಕೊಡಲಾಗಿದೆ.
ಸೊಸೈಟಿಯಲ್ಲಿ ವಂಚನೆ ನಡೆದಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆಯ ನಿರ್ದೇಶದಂತೆ ರತೀಶನ್ ರಜೆಯಲ್ಲಿ ದ್ದನು. ರಜೆಯಲ್ಲಿದ್ದ ಸಂದರ್ಭದಲ್ಲೇ ರತೀಶನ್ ಸೊಸೈಟಿಗೆ ತಲುಪಿ ಲಾಕರ್‌ನಲ್ಲಿದ್ದ ಅಡವು ಚಿನ್ನಾಭರಣ ಗಳನ್ನು ಸಾಗಿಸಿದ್ದಾನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರತೀಶನ್‌ನನ್ನು ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ನಿರ್ಧ ರಿಸಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಸೆರೆಗೀಡಾದ ಆರು ಮಂದಿ ಆರೋಪಿಗಳನ್ನು ಈಗಾಗಲೇ ಹೊಸದುರ್ಗ ಜೈಲಿನಲ್ಲಿ ಜತೆಯಾಗಿ ಕುಳ್ಳಿರಿಸಿ ತನಿಖೆಗೊಳಪಡಿಸಲಾಗಿತ್ತು. ಆದರೆ ಹಣ ಯಾವ ಅಗತ್ಯಕ್ಕೆ ಬಳಸಲಾಗಿದೆ ಎಂಬ ಕುರಿತು ನಿಗೂಢತೆಗೆ ಪರಿಹಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ಆರೋಪಿಗಳನ್ನು ಇನ್ನಷ್ಟು ಹೆಚ್ಚಿನ ತನಿಖೆಗೊಳಪಡಿಸುವ ಅಂಗವಾಗಿ ತನಿಖಾ ತಂಡ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ.
ರತೀಶನ್ ಸೊಸೈಟಿಯಿಂದ ಸಾಗಿಸಿದ ಚಿನ್ನಾಭರಣಗಳನ್ನು ಅಡವಿರಿಸಿದ ಬೇಕಲ ಹದ್ದಾದ್ ನಗರದ ಮುಹಮ್ಮದ್ ಬಷೀರ್, ಪರಕ್ಕಳಾಯಿ ಏಳನೇ ಮೈಲಿನ ಅಬ್ದುಲ್ ಗಫೂರ್, ಕಾಞಂಗಾಡ್ ನೆಲ್ಲಿಕ್ಕಾಡ್‌ನ ಎ. ಅನಿಲ್ ಕುಮಾರ್ ಎಂಬವರು ಜೈಲಿನಲ್ಲಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಇವರು ಚಿನ್ನಾಭರಣಗಳನ್ನು ಅಡವಿರಿಸಿದ್ದರು. ಅಡವಿರಿಸಿ ಲಭಿಸಿದ ಹಣವನ್ನು ರತೀಶನ್‌ಗೆ ನೀಡಿರುವುದಾಗಿ ಈ ಮೂವರು ತಿಳಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರತೀಶನ್ ಹಾಗೂ ಅಬ್ದುಲ್ ಜಬ್ಬಾರ್‌ನನ್ನು ಇತ್ತೀಚೆಗೆ ತಮಿಳುನಾಡಿನ ಈರೋಡ್‌ನಿಂದ ಸೆರೆಹಿಡಿಯಲಾಗಿತ್ತು. ರತೀಶನ್‌ನಿಂದ ಹಲವು ಬಾರಿಯಾಗಿ ಪಡೆದ ಹಣನ್ನು ಜಬ್ಬಾರ್ ಕಲ್ಲಿಕೋಟೆಯ ನಬೀಲ್‌ನ ಖಾತೆಗೆ ಠೇವಣಿ ಮಾಡಿದ್ದಾನೆನ್ನಲಾಗಿದೆ. ಆದರೆ ಹಣವನ್ನು ಹಿಂತೆಗೆದು ಜಬ್ಬಾರ್‌ಗೆ ನೀಡಿರುವುದಾಗಿ ನಬೀಲ್ ಹೇಳಿದ್ದಾನೆನ್ನಲಾಗಿದೆ. ಆದರೆ ಜಬ್ಬಾರ್‌ನ ಕೈಯಲ್ಲಿ ಹಣ ಪತ್ತೆಯಾಗದ ಹಿನ್ನೆಲೆಯಲ್ಲಿ ಹಣ ಯಾವ ಅಗತ್ಯಕ್ಕೆ ಬಳಸಲಾಗಿದೆ. ಅದು ಯಾರ ಕೈಯಲ್ಲಿದೆಯೆಂದು ತಿಳಿಯಲು ತನಿಖೆ ತೀವ್ರಗೊಳಿಸಲಾಗಿದೆಯೆಂದು ತಿಳಿದುಬಂದಿದೆ.