ಕಾರಡ್ಕ ಸೊಸೈಟಿಯಲ್ಲಿ ವಂಚನೆ: ಲಪಟಾಯಿಸಿದ ಚಿನ್ನ ಮಾಣಿಕ್ಕೋತ್‌ನಲ್ಲಿ ಅಡವಿರಿಸಿದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ ಲಪಟಾಯಿಸಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಪ್ರಮಾಣವನ್ನು ಕಾಞಂಗಾಡ್ ಬಳಿಯ ಮಾಣಿಕ್ಕೋತ್‌ನ ಸಂಸ್ಥೆಯೊಂದರಲ್ಲಿ ಅಡವಿರಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೋಟಚ್ಚೇರಿ ಸಹಕಾರಿ ಬ್ಯಾಂಕ್‌ನ ಮಾಣಿಕ್ಕೋತ್ ಶಾಖೆಯಲ್ಲಿ ಅಡವಿರಿಸಿದ 106 ಗ್ರಾಂ ಚಿನ್ನವನ್ನು ಪ್ರಕರಣದ ತನಿಖೆ ನಡೆಸುವ ಕಣ್ಣೂರು ಕ್ರೈಂಬ್ರಾಂಚ್‌ನ ಆರ್ಥಿಕ ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ನಿನ್ನೆ ಅಪರಾಹ್ನ ಬ್ಯಾಂಕ್‌ಗೆ ತಲುಪಿ ಪತ್ತೆಹಚ್ಚಿದ್ದಾರೆ. ಪ್ರಕರಣದಲ್ಲಿ ಮೊದಲು ಸೆರೆಗೀಡಾದ ಅದಿಯಾಂಬೂರ್ ನಿವಾಸಿ ಕಾರಡ್ಕ ಸೊಸೈಟಿಯಿಂದ ಲಪಟಾಯಿಸಿದ ಚಿನ್ನವನ್ನು ಅಡವಿರಿಸಿದ್ದನು. ಈತ ರಿಮಾಂಡ್‌ನಲ್ಲಿದ್ದ ವೇಳೆ ವಿಚಾರಣೆ ನಡೆಸಿದಾಗ 106 ಗ್ರಾಂ ಚಿನ್ನವನ್ನು ಮಾಣಿಕ್ಕೋತ್ ಬ್ಯಾಂಕ್ ಶಾಖೆಯಲ್ಲಿ ಅಡವಿರಿಸಿದ ಬಗ್ಗೆ ಮಾಹಿತಿ ಲಭಿಸಿತ್ತು. ಕಾರಡ್ಕ ಸೊಸೈಟಿಯ ಸೆಕ್ರೆಟರಿಯಾಗಿದ್ದ ಮಾಜಿ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ಕೆ. ರತೀಶನ್ ಸೊಸೈಟಿಯಲ್ಲಿ ಗ್ರಾಹಕರು ಅಡವಿರಿಸಿದ್ದ ಚಿನ್ನಾಭರಣಗಳನ್ನು ಲಪಟಾಯಿಸಿ ಇತರ ಆರೋಪಿಗಳಿಗೆ ಹಸ್ತಾಂತರಿಸಿರುವುದಾಗಿ ಪ್ರಕರಣ ದಾಖಲಿಸಲಾಗಿದೆ. ತಿಂಗಳುಗಳ ಹಿಂದೆ ನಡೆದ ಈ ವಂಚನೆ ಪ್ರಕರಣವನ್ನು ಮೊದಲು ಲೋಕಲ್ ಪೊಲೀಸರು ಬಳಿಕ ಜಿಲ್ಲಾ ಕ್ರೈಂಬ್ರಾಂಚ್ ತನಿಖೆ ನಡೆಸಿತ್ತು. ಅನಂತರ ರಾಜ್ಯ ಕ್ರೈಂಬ್ರಾಂಚ್‌ಗೆ ತನಿಖೆಯನ್ನು ಹಸ್ತಾಂತರಿಸಲಾಯಿತು.