ಕಾರಿನಲ್ಲಿ ಗಾಂಜಾ ಸಾಗಾಟ : ಇಬ್ಬರಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಾಟ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ   ಪ್ರಿಯಾ ಕೆ. ಅವರು ತಲಾ ಎರಡು ವರ್ಷ ಕಠಿಣ ಸಜೆ ಹಾಗೂ ೨೦,೦೦೦ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಾಸರಗೋಡು ತಳಂಗರೆ ಬಾಂಗೋಡು ನಿವಾಸಿ ಬಿ.ಎ. ಶಂಸುದ್ದೀನ್ (46) ಮತ್ತು ಕಾಞಂಗಾಡ್ ಸೌತ್ ಕೊವ್ವಲ್ ಹೌಸ್‌ನ ಕಾರಾಟ್ ನೌಶಾದ್ (57) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

2020 ಅಕ್ಟೋಬರ್ 12ರಂದು ನೀಲೇಶ್ವರ- ಪಳ್ಳಿಕ್ಕೆರೆ ರೈಲು ಗೇಟಿನ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದು ನೀಲೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಕೆ.ವಿ. ಮಹೇಶ್‌ರ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆ ದಾರಿಯಾಗಿ ಆರೋಪಿಗಳು ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಹತ್ತು ಕಿಲೋ ಗಾಂಜಾ ಪತ್ತೆಹಚ್ಚಲಾಗಿತ್ತು. ಅಂದು ಚಂದೇರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಪಿ. ನಾರಾ ಯಣನ್ ಈ ಪ್ರಕರಣದ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್  ಚಂದ್ರ ಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲ ವಾದಿಸಿದ್ದರು.

You cannot copy contents of this page