ಪೆರ್ಲ: ಅಕ್ರಮ ಮದ್ಯ ಮಾರಾಟ ಪತ್ತೆಗಾಗಿ ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಯೋರ್ವ ಅಬಕಾರಿ ತಂಡದ ಮೇಲೆ ಕತ್ತಿ ಬೀಸಿ ಬಳಿಕ ಸ್ವಯಂ ತನ್ನ ಕೈಗೆ ಗಾಯಗೊಳಿಸಿದ ಘಟನೆ ಪೆರ್ಲದಲ್ಲಿ ನಡೆದಿದೆ.
ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ಎಂ.ವಿ. ಸುಧೀಂದ್ರನ್ ನೇತೃತ್ವದ ತಂಡ ಪೆರ್ಲದಲ್ಲಿ ಮೊನ್ನೆ ಮಧ್ಯಾಹ್ನ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಬೆಳವಣಿಗೆ ನಡೆದಿದೆ. ನಾವು ಅಬಕಾರಿ ಕಾರ್ಯಾಚರಣೆಗಿಳಿದಾಗ ಕನ್ನಡಿಕ್ಕಾನ ನಿವಾಸಿ ಮೊಯ್ದೀನ್ ಕುಂಞಿ (60) ಎಂಬಾತ 2.52 ಲೀಟರ್ ಕರ್ನಾಟಕ ಮದ್ಯ ಕೈವಶವಿರಿಸಿಕೊಂಡಿರುವುದು ಪತ್ತೆಯಾಗಿದೆ. ಆಗ ಆತನನ್ನು ಸೆರೆಹಿಡಿಯಲು ಹೋದಾಗ ಕತ್ತಿ ಬೀಸಿದ ಬಳಿಕ ಸ್ವಯಂ ತನ್ನ ಕೈಗೆ ಕಡಿದು ಗಾಯಗೊಳಿಸಿದ್ದ ನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಯಿತು. ಇದಕ್ಕೆ ಸಂಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿರುವ ಹಿನ್ನೆಲೆಯಲ್ಲಿ ಸದ್ಯ ಆತನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ವಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ರಮೇಶನ್ ಆರ್, ಸಿವಿಲ್ ಎಕ್ಸೈಸ್ ಆಫೀಸರ್ ಮೋಹನ್ ಕುಮಾರ್ ಎಂಬವರು ಒಳಗೊಂಡಿದ್ದರು. ಈ ಬಗ್ಗೆ ಇನ್ನೊಂದೆಡೆ ಬದಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.