ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅನುಮತಿ ಕೋರಿ ಅರ್ಜಿ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ಹೆಸರನ್ನು ವೈದ್ಯಕೀಯ ಕಾಲೇಜು ಆಗಿ ಬದಲಾಯಿಸಿರುವ ಬೆನ್ನಲ್ಲೇ ಇಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್ ಕೋರ್ಸ್ ಆರಂಭಿಸುಲು ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಮೆಡಿಕಲ್ ಎಜ್ಯುಕೇಶನ್ ಡೈರೆಕ್ಟರೇಟ್)ನ ಸಂಬಂಧಪಟ್ಟವರು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಎಂಬಿಬಿಎಸ್ ಅನುಮತಿ ಲಭಿಸುವುದಕ್ಕಿರುವ ಅಗತ್ಯದ ಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ವೈದ್ಯಕೀಯ ಕಾಲೇಜು ಕೋರ್ಸ್ ಆರಂಭಿಸಬೇಕಾಗಿದ್ದಲ್ಲಿ ಅದಕ್ಕೆ ಹೊಂದಿಕೊಂಡು ಕನಿಷ್ಠ 220 ಹಾಸಿಗೆ ಸೌಕರ್ಯ ಹೊಂದಿರುವ ಆಸ್ಪತ್ರೆ ಇರಬೇಕೆಂಬ ನಿಬಂಧನೆಯೂ ಇದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಈಗ 212 ಹಾಸಿಗೆ ಸೌಕರ್ಯಗಳಿದ್ದು, ಎಂಬಿಬಿಎಸ್ ಕೋರ್ಸ್‌ಗಾಗಿ ಈ ಹಾಸಿಗೆ ಸೌಕರ್ಯವನ್ನು ೨೨೦ಕ್ಕೇರಿಸುವ ಅಗತ್ಯದ ಕ್ರಮಕ್ಕೆ ಈಗ ಚಾಲನೆ ನೀಡಲಾಗಿದೆ. ಹಾಸಿಗೆ ಸೌಕರ್ಯವನ್ನು ಈಗಿನ 212ರಿಂದ 220ಕ್ಕೇರಿಸಲು ಸರಕಾರ ವಿದ್ಯುಕ್ತ ಅಧಿಸೂಚನೆಯನ್ನು ಜ್ಯಾರಿಗೊಳಿಸಬೇಕಾಗಿದೆ. ಅಂತಹ ಅಧಿಸೂಚನೆಯನ್ನು ಸರಕಾರ ಶೀಘ್ರ ಹೊರಡಿಸುವ ಸಾಧ್ಯತೆಯಿದೆ ಮುಂದಿನ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅಗತ್ಯದ ಎಲ್ಲಾ ಕ್ರಮಗಳನ್ನು ತುರ್ತಾಗಿ ನಡೆಸಲಾಗುತ್ತದೆ. ಇದರಂತೆ ಪ್ರಥಮ ಹಂತದಲ್ಲಿ 50 ಮಂದಿಗೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ನೀಡಲಾಗುವುದು. ಈ ಕೋರ್ಸ್ ಆರಂಭಿಸಬೇಕಾಗಿದ್ದಲ್ಲಿ 500 ಮಂದಿಗೆ ಕುಳಿತುಕೊಂಡು ಓದುವ ಸೌಕರ್ಯ ಹೊಂದಿರುವ ನಾಲ್ಕು ಸಾವಿರ ಸ್ಕ್ವಾರ್ ಫೀಟ್ ವಿಸ್ತೀರ್ಣದ ಹವಾ ನಿಯಂತ್ರಿತ ಸೌಕರ್ಯ ಹೊಂದಿರುವ ಕೇಂದ್ರೀಕೃತ ಲೈಬ್ರೆರಿಯ ಅಗತ್ಯವೂ ಇದೆ. ಅದಕ್ಕಿರುವ ಕ್ರಮ ಆರಂಭಿಸಲಾಗಿದೆ. ವೈದ್ಯಕೀಯ ಕಾಲೇಜು ಆರಂಭಿಸುವ ಪೂರ್ವಭಾವಿ ಕ್ರಮ ಎಂಬಂತೆ ೪೪ ಹೊಸ ವೈದ್ಯರನ್ನು ಜನರಲ್ ಆಸ್ಪತ್ರೆಯಲ್ಲಿ ನೇಮಿಸುವ ಅಧಿಸೂಚನೆಯನ್ನೂ ಆರೋಗ್ಯ ಇಲಾಖೆ ಜ್ಯಾರಿಗೊಳಿಸಿದೆ.
ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅದರ ನಿರ್ಮಾಣ ಕೆಲಸ ಪೂರ್ಣಗೊಂಡು ಅಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲು 220 ಹಾಸಿಗೆ ಸೌಕರ್ಯಗಳನ್ನು ಏರ್ಪಡಿಸಿ ಚಿಕಿತ್ಸೆ ಆರಂಭಿಸಿ ಮೂರು ವರ್ಷಗಳ ಬಳಿಕವಷ್ಟೇ ವೈದ್ಯಕೀಯ ಕಾಲೇಜನ್ನು ಕಾಸರಗೋಡು ಜನರಲ್ ಆಸ್ಪತ್ರೆಯಿಂದ ಅಲ್ಲಿಗೆ ಸ್ಥಳಾಂತರಿ ಸಲಾಗುವುದು. ಅಷ್ಟರ ತನಕ ವೈದ್ಯಕೀಯ ಕಾಲೇಜು ಕಾಸರಗೋ ಡು ಜನರಲ್ ಆಸ್ಪತ್ರೆಯಲ್ಲೇ ಮಂದುವರಿಯಲಿದೆ.