ಕಾಸರಗೋಡು ಸಾರಿಯ ಪ್ರೌಢಿಮೆಯನ್ನು ಮತ್ತೆ ತರಲು ಜಿಲ್ಲಾಡಳಿತದಿಂದ ಹೊಸ ಯೋಜನೆಗೆ ರೂಪು
ಕಾಸರಗೋಡು ಸಾರಿಯ ಪ್ರೌಢಿಮೆಯನ್ನು ಮತ್ತೆ ತರಲು ಜಿಲ್ಲಾಡಳಿತದಿಂದ ಹೊಸ ಯೋಜನೆಗೆ ರೂಪು
ಕಾಸರಗೋಡು: ಭಾರತದ ಕೈಮಗ್ಗದ ಬ್ರಾಂಡ್ ಆಗಿರುವ ಕಾಸರಗೋಡಿನ ಸ್ವಂತ ಉತ್ಪನ್ನ ಕಾಸರಗೋಡು ಸಾರಿಗೆ ಇನ್ನಷ್ಟು ಹೆಚ್ಚು ಮಾರುಕಟ್ಟೆ ಲಭಿಸುವುದಕ್ಕಾಗಿ, ಜಿಲ್ಲೆಗೆ ತಲುಪುವ ಪ್ರವಾಸಿಗರ ಮಧ್ಯೆ ಆಕರ್ಷಣೆ ಹುಟ್ಟಿಸುವುದಕ್ಕಾಗಿ ಜಿಲ್ಲಾ ಆಡಳಿತ ನೂತನ ಯೋಜನೆ ಸಿದ್ಧಪಡಿಸುತ್ತಿದೆ. ಇದರಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಕಾಸರಗೋಡು ಸಾರೀಸ್ ಉತ್ಪಾದಿಸುವ ಉದಯಗಿರಿಯಲ್ಲಿನ ಕಾಸರಗೋಡು ವೀವರ್ಸ್ ಕೋ-ಆಪರೇಟಿವ್ ಪ್ರೊಡಕ್ಷನ್ ಆಂಡ್ ಸೇಲ್ಸ್ ಸೊಸೈಟಿ ಲಿಮಿಟೆಡ್ನ ಕೇಂದ್ರವನ್ನು ಸಂದರ್ಶಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಧಿಕಾರಿ ವಿ. ಚಂದ್ರನ್, ಟೂರಿಸಂ ಡೆಪ್ಯುಟಿ ಡೈರೆಕ್ಟರ್ ಶ್ರೀಕುಮಾರ್, ಲಿಜೋ ಜೋಸೆಫ್, ಜಿಲ್ಲಾ ಇನ್ಫರ್ಮೇಶನ್ ಆಫೀಸರ್ ಎಂ. ಮಧುಸೂದನನ್ ಎಂಬಿವರು ಜಿಲ್ಲಾಧಿಕಾರಿ ಜೊತೆಗಿದ್ದರು. ಸೊಸೈಟಿಯ ಅಧ್ಯಕ್ಷ ಮಾಧವ ಹೇರಳ, ಕಾರ್ಯದರ್ಶಿ ಬಿ.ಎಂ. ಅನಿತ, ಉಪಾಧ್ಯಕ್ಷ ಚಂದ್ರಹಾಸ, ನಿರ್ದೇಶಕರಾದ ದಿವಾಕರನ್, ರಾಮಚಂದ್ರ, ದಾಮೋದರ, ಗಂಗಮ್ಮ ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಯವರೊಂದಿಗೆ ಮಾತುಕತೆ ನಡೆಸಿದರು.
ಕಾಸರಗೋಡು ಸಾರೀಸ್ ಪ್ರಸ್ತುತ ಅವನತಿಯತ್ತ ಸಾಗುತ್ತಿದ್ದು,ಸರಕಾರದ ವಿವಿಧ ಹಂತಗಳಲ್ಲಿರುವ ಸಹಾಯ ಅನಿವಾರ್ಯವೆಂದು ಪದಾಧಿಕಾರಿಗಳು ತಿಳಿಸಿದರು. 1938ರಲ್ಲಿ ಸ್ಥಾಪಿಸಿದ ಸೊಸೈಟಿಯಾಗಿದೆ ಇದು. 600 ಕಾರ್ಮಿಕರು ದುಡಿಯುತ್ತಿದ್ದ ಇಲ್ಲಿ ಈಗ 25 ಮಹಿಳೆಯರು ಹಾಗೂ 10 ಪುರುಷರು ಸೇರಿ 35 ಕಾರ್ಮಿಕರು ಮಾತ್ರವೇ ಇರುವುದು. ಯುವಜನರು ಈ ರಂಗಕ್ಕೆ ಕಾಲಿಡುವುದಿಲ್ಲವೆಂದು ಪದಾಧಿಕಾರಿಗಳು ತಿಳಿಸಿದರು. ಕಾಸರಗೋಡು ಸಾರಿಯ ಹೊರತಾಗಿ ಸಮವಸ್ತ್ರ ಸಾಮಗ್ರಿಗಳು, ಬೆಡ್ಶೀಟ್, ಟವಲ್, ಲುಂಗಿ ಮೊದಲಾದವುಗಳನ್ನು ಸಿದ್ಧಪಡಿಸಲಾಗುತ್ತಿದೆ.
ಪ್ರವಾಸಿ ವಲಯವನ್ನು ಜೋಡಿಸಿ ಮಾರುಕಟ್ಟೆ ಕಂಡುಕೊಳ್ಳಲು ಹಾಗೂ ಉತ್ಪಾದನೆ ಹೆಚ್ಚಿಸಲು ಕ್ರಮ ಸ್ವೀಕರಿಸುವುದಾಗಿ ಜಿಲ್ಲಾಧಿಕಾರಿ ನುಡಿದರು. ಈ ಬಗ್ಗೆ ಸಮಗ್ರವಾದ ಸಭೆ ನಡೆಸುವುದಕ್ಕೆ ಡಿಟಿಪಿಸಿ ಸೆಕ್ರೆಟರಿಗೆ ಅವರು ನಿರ್ದೇಶ ನೀಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಸೇರಿಸಿ ಕಾಸರಗೋಡು ಸಾರೀಸ್ನ ಪ್ರೌಢಿಮೆಯನ್ನು ಮತ್ತೆ ತರಲು ನೂತನ ಯೋಜನೆಗಳಿಗೆ ರೂಪು ನೀಡಲು ಈ ವಲಯದ ತಜ್ಞರೊಂದಿಗೆ ಚರ್ಚೆ ನಡೆಸುವುದಾಗಿ ಜಿಲ್ಲಾಧಿಕಾರಿ ನುಡಿದರು.
ಜಿಲ್ಲೆಯಲ್ಲಿ ಮಾತ್ರವಾಗಿ ನೇಯ್ದು ತಯಾರಿಸುವ ಪರಂಪರಾಗತ ಬಟ್ಟೆಯ ಸೀರೆಯಾಗಿದೆ ಕಾಸರಗೋಡು ಸಾರಿ. ಅದು ಕೈಗಳಿಂದಲೇ ನಿರ್ಮಿಸಲಾಗುತ್ತಿದೆ ಎಂಬುದು ಇದರ ಪ್ರತ್ಯೇಕತೆಯಾಗಿದೆ. ರಾಜ್ಯದಲ್ಲಿರುವ ನಾಲ್ಕು ಕೈಮಗ್ಗ ಘಟಕಗಳಲ್ಲಿ ಇದು ಒಂದಾಗಿದ್ದು, ಉಳಿದವು ಬಾಲರಾಮಪುರ, ಪುತ್ತಾಂಬಳ್ಳಿ, ಚೇಂದಮಂಗಲಂನಲ್ಲಿದೆ.