ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಬಿಜೆಪಿಯಿಂದ ಅವಿಶ್ವಾಸ ಗೊತ್ತುವಳಿ ನೋಟೀಸು

ಕುಂಬಳೆ: ಕುಂಬಳೆ ಪಂಚಾಯತ್ ಅಧ್ಯಕ್ಷೆ ವಿರುದ್ಧ ಆಡಳಿತ ಸಮಿತಿಯ ವಿಪಕ್ಷವಾದ ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಪಂಚಾಯತ್‌ನಲ್ಲಿ ನಡೆಯುವ ದುರಾಡಳಿತೆಯಿಂದ ಸಹನೆಗೆಟ್ಟು ಅವಿಶ್ವಾಸಕ್ಕೆ ನೋಟೀಸು ನೀಡಿರುವುದಾಗಿ ಬಿಜೆಪಿ ಸದಸ್ಯರು ತಿಳಿಸಿದ್ದಾರೆ. ರಾಜಕೀಯ ಹಾಗೂ ಹಣದ ಬಲದಿಂದ ನಾಲ್ಕೂವರೆ ವರ್ಷಗಳ ಕಾಲ ಪಂಚಾಯತ್‌ನಲ್ಲಿ ದುರಾಡಳಿತೆ ನಡೆಯುತ್ತಿದೆ ಎಂದೂ ಇದರಿಂದಾಗಿ ನೋಟೀಸು ನೀಡಬೇಕಾಗಿ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಅವಿಶ್ವಾಸ ಗೊತ್ತುವಳಿ ನೋಟೀಸನ್ನು ನಿನ್ನೆ ಸಂಜೆ ಬಿಜೆಪಿ ಸದಸ್ಯರಾದ ಪ್ರೇಮಾವತಿ, ಪ್ರೇಮಲತಾ ಎಸ್, ಸುಲೋಚನ ಪಿ, ಶೋಭಾ ಎಸ್, ವಿದ್ಯಾ ಎನ್. ಪೈ, ಪುಷ್ಪಲತಾ, ವಿವೇಕಾನಂದ ಶೆಟ್ಟಿ, ಅಜಯ್ ಎಂ, ಮೋಹನ್ ಕೆ. ಎಂಬಿವರು ಸೇರಿ ರಿಟರ್ನಿಂಗ್ ಆಫೀಸರ್ ಆಗಿರುವ ಬ್ಲೋಕ್ ಪಂಚಾಯತ್ ಕಾರ್ಯದರ್ಶಿ ಜೋನ್ ಎ. ಡಿಕ್ರೂಸ್‌ರಿಗೆ ನೀಡಿದ್ದಾರೆ. ೨೩ ಮಂದಿ ಸದಸ್ಯರುಳ್ಳ ಕುಂಬಳೆ ಪಂಚಾಯತ್ ಆಡಳಿತ ಸಮಿತಿಯಲ್ಲಿ ಆಡಳಿತ ಪಕ್ಷವಾದ ಲೀಗ್‌ಗೆ ೭ ಹಾಗೂ ಮುಸ್ಲಿಂ ಲೀಗ್‌ನ ಬಂಡುಕೋರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಓರ್ವ ಸದಸ್ಯರಿದ್ದಾರೆ. ಎಸ್‌ಡಿಪಿಐಯ ಓರ್ವ ಸದಸ್ಯನೂ ಲೀಗ್‌ಗೆ ಬೆಂಬಲಿಸುತ್ತಿದ್ದಾರೆ. ಇಬ್ಬರು ಕಾಂಗ್ರೆಸ್ ಸದಸ್ಯರು ಆಡಳಿತ ಪಕ್ಷದೊಂದಿಗಿದ್ದಾರೆ. ಬಿಜೆಪಿಗೆ ೯ ಮಂದಿ, ಸಿಪಿಎಂಗೆ ಇಬ್ಬರು ಸ್ವತಂತ್ರರು ಸಹಿತ ಮೂವರು ಸದಸ್ಯರಿದ್ದಾರೆ. ಇತ್ತೀಚೆಗೆ ಕುಂಬಳೆಯಲ್ಲಿ ನಿರ್ಮಿಸಿದ ನಾಲ್ಕು  ಬಸ್‌ವೈಟಿಂಗ್ ಶೆಡ್‌ಗಳ ನಿರ್ಮಾಣಕ್ಕೆ ಸಂಬಂಧಪಟ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಇದರಿಂದ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಿಪಿಎಂ ಹಾಗೂ ಎಸ್‌ಡಿಪಿಐ ಮುಂಚೂಣಿಯಲ್ಲಿತ್ತು. ಆದ್ದರಿಂದ ಅವಿಶ್ವಾಸ ಗೊತ್ತುವಳಿಯಲ್ಲಿ ಇವರು ಕೈಗೊಳ್ಳುವ ನಿಲುವು ನಿರ್ಣಾಯಕವಾಗಿರುವುದು.

You cannot copy contents of this page