ಕುಂಬಳೆ ಪೇಟೆಯಲ್ಲಿ ಅಂಗಡಿಗೆ ನುಗ್ಗಿದ ಕಾಡುಹಂದಿ
ಕುಂಬಳೆ: ಅಂಗಡಿಯೊಂದಕ್ಕೆ ಕಾಡು ಹಂದಿ ನುಗ್ಗಿ ಭೀತಿ ಸೃಷ್ಟಿಸಿದ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸ್ಮಾರ್ಟ್ ಪೋಯಿಂಟ್ ಹೈಪರ್ ಮಾರ್ಕೆಟ್‌ಗೆ ನಿನ್ನೆ ರಾತ್ರಿ 9 ಗಂಟೆ ವೇಳೆ ಹಂದಿ ನುಗ್ಗಿದೆ. ಈ ವೇಳೆ ಅಂಗಡಿಯಲ್ಲಿ ನೌಕರರು, ಗ್ರಾಹಕರ ಸಹಿತ ಹತ್ತರಷ್ಟು ಮಂದಿಯಿದ್ದರು. ಸಾಮಗ್ರಿಗಳನ್ನು ಇರಿಸಿದ್ದ ಸ್ಥಳದಲ್ಲಿ ಹಂದಿ ಅಲೆದಾಡಿದ್ದು, ಇದು ಅಲ್ಪ ಹೊತ್ತು ಆತಂಕಕ್ಕೆ ಕಾರಣವಾಯಿತು. ಅಂಗಡಿಯಲ್ಲಿದ್ದವರು ಭಯಗೊಂಡು ದೂರಕ್ಕೆ ಸರಿದಾಗ ಹಂದಿ ಹೊರಗೆ ಓಡಿ ಶಾಲಾ ಅಂಗಳದತ್ತ ಸಾಗಿದೆ.
ಕಳೆದ ಕೆಲವು ತಿಂಗಳಿಂದ ಕುಂಬಳೆ ಪೇಟೆಯಲ್ಲಿ ಕಾಡುಹಂದಿಗಳು ನಿರಂತರವಾಗಿ ಕಂಡುಬರುತ್ತಿದೆ.
ರಸ್ತೆಯ ವಿವಿಧೆಡೆಗಳಲ್ಲಿ ಹಂದಿಗಳ ಹಾವಳಿಯಿಂದ ಭಯ ಸೃಷ್ಟಿಯಾಗಿದೆ. ಕಳೆದ ಆರು ತಿಂಗಳೊಳಗೆ ಕಾಡು ಹಂದಿಗಳು ಹಲವು ವಾಹನಗಳ ಮೇಲೆ ದಾಳಿ ನಡೆಸಿದ್ದು, ಇದರಿಂದ ಹಲವರು ಗಾಯಗೊಂಡ ಘಟನೆಯೂ ನಡೆದಿದೆ.