ಕುಖ್ಯಾತ ವಾಹನ ಕಳವು ಆರೋಪಿಗಾಗಿ ಲುಕೌಟ್ ನೋಟೀಸ್ ಜ್ಯಾರಿ

ಕಾಸರಗೋಡು: ಕದ್ದ ಟಿಪ್ಪರ್ ಲಾರಿಯನ್ನು ಹರಿಸಿ ಪೊಲೀಸರನ್ನು ಕೊಲೆಗೈಯ್ಯಲೆತ್ನಿಸಿದ ಕುಖ್ಯಾತ ವಾಹನ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ.

ಚಟ್ಟಂಚಾಲ್ ತೆಕ್ಕಿಲ್ ನಂಬಿಡಿಪಳ್ಳಂ ಹೌಸ್‌ನ ಮೊಹಮ್ಮದ್ ರಂಝಾನ್ ಅಲಿಯಾಸ್ ರಂಝಾನ್ (೨೫) ಎಂಬಾತನ ಪತ್ತೆಗಾಗಿ ಚೀಮೇನಿ ಪೊಲೀಸರು ಈ ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಬೇಕಲ, ಹೊಸದುರ್ಗ, ಕಣ್ಣಾಪುರಂ ಮತ್ತು ವಡಗರ ಪೊಲೀಸ್ ಠಾಣೆಗಳಲ್ಲೂ ಹಲವು ಕೇಸುಗಳಿವೆ ಎಂದು ಲುಕೌಟ್ ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಕಳೆದ ಮೇ ೨೪ರಂದು ಚೀಮೇನಿ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಲುಕೌಟ್ ನೋಟೀಸ್ ಜ್ಯಾರಿಗೊಳಿಸಲಾಗಿದೆ. ವಡಗರದಿಂದ ಕದ್ದು ಸಾಗಿಸಲಾದ ಲಾರಿಯನ್ನು ಚೀಮೇನಿ ಮೂಲಕ ಸಾಗಿಸಲೆತ್ನಿಸುವ ವೇಳೆ ವಡಗರ ಸೈಬರ್ ಸೆಲ್ ನೀಡಿದ ಮಾಹಿತಿಯಂತೆ ಆ ಲಾರಿಯನ್ನು ಚೀಮೇನಿ ಬಳಿ ಚೀಮೇನಿ ಪೊಲೀಸರು  ವಶಪಡಿಸಲೆತ್ನಿಸಿದ ವೇಳೆ ಎಸ್‌ಐ ಪಿ.ವಿ. ರಾಮಚಂದ್ರನ್‌ರ ನೇತೃತ್ವದ ಪೊಲೀಸರ ಮೇಲೆ ಅದನ್ನು ಹರಿಸಿ ಅವರನ್ನು ಕೊಲೆಗೈಯ್ಯಲೆತ್ನಿಸಿದ ದೂರಿನಂತೆ ಚೀಮೇನಿ ಪೊಲೀಸರು ರಂಝಾನ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ  ಲುಕೌಟ್ ನೋಟೀಸ್ ಜ್ಯಾರಿಗೊಳಿಸಲಾಗಿದೆ.

You cannot copy contents of this page