ಬದಿಯಡ್ಕ: ಕುಂಬ್ಡಾಜೆ ಪಂಚಾಯತ್‌ನ ಬಾಳೆಗದ್ದೆ ನಿವಾಸಿ ನಾರಾಯಣ ಮಣಿಯಾಣಿ (48) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಗ್ಗು ಮಣಿಯಾಣಿ- ಚಂದ್ರಾವತಿ ದಂಪತಿ ಪುತ್ರನಾದ ಇವರು ಕಳೆದ ೨೮ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಆ ಬಳಿಕ ನಾಪತ್ತೆಯಾಗಿದ್ದಾರೆ. ಪರಿಸರದಲ್ಲೆಲ್ಲಾ ಹುಡುಕಾಡಿದರೂ ಪತ್ತೆಯಾಗದ ಕಾರಣ ಸಹೋದರ ಉದಯ ಕುಮಾರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗುವಾಗ ಕಪ್ಪು ಬಣ್ಣದ ಅಂಗಿ ಹಾಗೂ ಕಾವಿ ಬಣ್ಣದ ಪಂಚೆ ಧರಿಸಿದ್ದರೆನ್ನಲಾಗಿದೆ. ಕಾಯಿಮಲೆ ಪೆರ್ವತ್ತೋಡಿ ಪರಿಸರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಇವರು ಈ ಭಾಗದ ತೋಡಿಗೆ ಅಡಿಕೆ ಮರದಿಂದ ನಿರ್ಮಿಸಿದ ಕಾಲುದಾರಿಯಲ್ಲಿ ದಿನವೂ ಸಂಚರಿಸುವವರಾಗಿದ್ದಾರೆ. ಈ ಕಾಲುಸೇತುವೆಯಿಂದ ಇತ್ತೀಚೆಗೆ ಓರ್ವರು ಬಿದ್ದು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ. ಈ ಪರಿಸರದ ಮಕ್ಕಳು ಶಾಲೆಗೆ ತೆರಳಲು, ಹಿರಿಯರು ಕೆಲಸಕ್ಕೆ, ಬ್ಯಾಂಕ್, ಆಸ್ಪತ್ರೆ, ವಿಲ್ಲೇಜ್ ಕಚೇರಿಗೆ ತೆರಳಲು ಈ ಕಾಲುಸಂಕವನ್ನೇ ಉಪಯೋಗಿಸುತ್ತಿದ್ದು, ಜೀವ ಕೈಯಲ್ಲಿ ಹಿಡಿದು ಇದರಲ್ಲಿ ಸಂಚರಿಸುತ್ತಿದ್ದರೆನ್ನಲಾಗಿದೆ. ನಾರಾಯಣ ಮಣಿಯಾಣಿ ಇದರಲ್ಲಿ ಸಂಚರಿಸುತ್ತಿದ್ದ ಮಧ್ಯೆ ಬಿದ್ದು ನೀರುಪಾಲಾಗಿರಬಹುದೇ ಎಂಬ ಶಂಕೆ ಸ್ಥಳೀಯರು ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟವರು ಹುಡುಕಾಟ ಆರಂಭಿಸಿ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಬೇಕಾಗಿದೆ.
