ಕೇರಳದ ಶೇ. 13ರಷ್ಟು ಭೂ ಪ್ರದೇಶ ಕುಸಿತ ಸಾಧ್ಯತಾ ವಲಯದಲ್ಲಿ

ಕಾಸರಗೋಡು: ಕೇರಳದ ಒಟ್ಟು ಭೂ ಪ್ರದೇಶದಲ್ಲಿ ಶೇ. 13ರಷ್ಟು ಪ್ರದೇಶಗಳು ತೀವ್ರ ಭೂ ಕುಸಿತ ಸಾಧ್ಯತಾ ವಲಯದಲ್ಲಿದೆ ಎಂಬ ಕಳವಳಕಾರಿ ಮಾಹಿತಿಯನ್ನು ಈ ಬಗ್ಗೆ ತಜ್ಞರ ತಂಡ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಕುಪೋಸ್ ಪುದುವೈಪ್  ಕ್ಯಾಂಪಸ್‌ನ ಮುಖ್ಯಸ್ಥ ಡಾ. ಗಿರೀಶ್ ಗೋಪಿ ಹಾಗೂ ಕುಪೋಸ್ ಭೂ ಕುಸಿತ ವಿಭಾಗದ  ಸಂಶೋಧಕರಾದ ಪಿ.ಎಲ್. ಅಚ್ಚು ಎಂಬವರು ಒಳಗೊಂಡ ಅಧ್ಯಯನ ಸಮಿತಿ ತಯಾರಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.

2018ರಲ್ಲಿ ರಾಜ್ಯದ ಹಲವೆಡೆಗಳಲ್ಲಿ ಉಂಟಾದ ಮಹಾ ಪ್ರವಾಹದ ಬಳಿಕ ಕೇರಳದಲ್ಲಿ ಅತೀ ತೀವ್ರ ಭೂ ಕುಸಿತ ಸಾಧ್ಯತಾ ವಿಸ್ತೀರ್ಣದಲ್ಲಿ ಶೇ. ೩.೪೬ರಷ್ಟು ಹೆಚ್ಚಳ ಉಂಟಾಗಿದೆ. ಇನ್ನು  ವಯನಾಡು ಜಿಲ್ಲೆಯಲ್ಲಿ ಶೇಕಡಾ 14ರಷ್ಟು ಭೂಪ್ರದೇಶ ಭೂಕುಸಿತದ ಸಾಧ್ಯತಾ ವಲಯದಲ್ಲಿದೆ. ಇದೂ ಸೇರಿದಂತೆ ರಾಜ್ಯದ ಒಟ್ಟಾರೆ ಭೂ ಪ್ರದೇಶದಲ್ಲಿ ಶೇ. 13ರಷ್ಟು ಪ್ರದೇಶಗಳು ಅತೀ ತೀವ್ರ ಭೂ ಕುಸಿತ ಸಾಧ್ಯತೆ ಇರುವ ವಲಯವಾಗಿ ಈಗ ಮಾರ್ಪಟ್ಟಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಭೂ ಕುಸಿತದ ಬಗ್ಗೆ ಪೂರ್ವ ಮುನ್ನೆಚ್ಚರಿಕೆ ನೀಡಲು ಅಟೋ ಮೇಡೆಡ್ ಹವಾಮಾನ ವರದಿ ಸ್ಟೇಷನ್‌ಗಳಲ್ಲಿ ಪ್ರತೀ ಐದರಿಂದ 10 ನಿಮಿಷಗಳ ಅಂತರದಲ್ಲಿ ಮಳೆ ಕುರಿತಾದ ಡಾಟಾ, ಭೂಮಿ ಹೊಂದಿ ರುವ ನೀರಿನ ಅಂಶಗಳ ವಿವಿಧ ಕೋನಗಳು, ಮಳೆ ಸುರಿಯುವ ಬಗ್ಗೆ ರ‍್ಯಾಡಾರ್ ಆಧಾರಿತ ಪೂರ್ವ ಮಾಹಿತಿ ಇತ್ಯಾದಿ ಸೌಕರ್ಯಗಳು ಅತ್ಯಗತ್ಯವಾಗಿದೆ. ಮಾತ್ರವಲ್ಲ ಕೃತಕತ ಬುದ್ದಿ ಹೊಂದಿರುವ ಡಾಟಾ ಸೆಟ್‌ಗಳ ಸಂಯೋಜನೆ ಮೂಲಕ ಮಳೆ ಮತ್ತು ಭೂ ಕುಸಿತ ಸಾಧ್ಯತೆ ಬಗ್ಗೆ ನಿಖರವಾದ ಪೂರ್ವ ಮಾಹಿತಿ ನೀಡುವ ಸೌಕ ರ್ಯಗಳನ್ನು ಏರ್ಪಡಿಸಬೇಕು. ಎಸ್‌ಎಂಎಸ್ ಆಧಾರಿತ ತಕ್ಷಣ ಹಾಗೂ ಸಕಾಲಿಕ ಮುನ್ನೆಚ್ಚರಿಕೆ ವ್ಯವಸ್ಥೆ ಕೇರಳಕ್ಕೆ ಅನಿವಾರ್ಯ ವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕನಿಷ್ಟ ಅವಧಿಯಲ್ಲಿ ಗರಿಷ್ಠ ಮಳೆ ಸುರಿಯುವಿಕೆ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಮಾತ್ರವಲ್ಲ ಮಣ್ಣು ಸವೆತ ಇಳಿಜಾರು ಪ್ರದೇಶಗಳ ಕುಸಿತಕ್ಕೂ ಕಾರಣವಾಗುತ್ತಿದೆ. ಅರಣ್ಯಗಳ ನಶೀಕರಣ, ಅನಿಯಂತ್ರಿತ ರೀತಿಯ ನಿರ್ಮಾಣ ಕೆಲಸಗಳು, ತಪ್ಪಾದ ರೀತಿಯ ಭೂ ವಿನಿಯೋಗ ಯೋಜನೆಗಳಿಗೆ ರೂಪು ಇತ್ಯಾದಿಗಳು ಭೂ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page