ಕೊಲೆ ಯತ್ನ ಸಹಿತ ಹಲವಾರು ಕೇಸುಗಳಲ್ಲಿ ಆರೋಪಿಯಾದ ವ್ಯಕ್ತಿ ಉದುಮದಿಂದ ಸೆರೆ
ಕಾಸರಗೋಡು: ಕೊಲೆ ಯತ್ನ ಸಹಿತ ಹಲವಾರು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಲ್ಲಂ ಚಾತನ್ನೂರು ಪೊಲೀಸರು ಉದುಮದಿಂದ ಬಂಧಿಸಿದ್ದಾರೆ. ಉದುಮ ನಾಲಾವಾದುಕ್ಕಲ್‌ನಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದ ಚಾತನ್ನೂರು ಕುಳಪ್ಪಾಡಂ ಪುತ್ತಂಗೋಡ್ ಜಾಬಿರ್ ಮಂಜಿಲ್‌ನ ಮುಹಮ್ಮದ್ ಅನ್ವರ್ ಅಲಿಯಾಸ್ ಅನುವನ್ನು ಸೆರೆ ಹಿಡಿಯಲಾಗಿದೆ. ಈತ ಉದುಮದಲ್ಲಿ ಇದ್ದಾನೆ ಎಂಬ ಬಗ್ಗೆ ರಹಸ್ಯ ಮಾಹಿತಿ ಲಭಿಸಿದ ಚಾತನ್ನೂರು ಪೊಲೀಸರು ಬೇಕಲ ಪೊಲೀಸರ ಸಹಾಯ ಆಗ್ರಹಿಸಿದ್ದರು. ಬೇಕಲ ಠಾಣೆ ಇನ್ಸ್ ಪೆಕ್ಟರ್ ಎಂ.ವಿ. ಶ್ರೀದಾಸ್, ಸಿವಿಲ್ ಪೊಲೀಸ್ ಆಫೀಸರ್ ಕೆ. ಪ್ರಸಾದ್ ಎಂಬಿವರ ಸಹಾಯದೊಂದಿಗೆ ಚಾತನ್ನೂರು ಪೊಲೀಸರು ಈತನನ್ನು ಸೆರೆ ಹಿಡಿದಿದ್ದಾರೆ.
2012ರಲ್ಲಿ ಸಿಪಿಎಂ ಕಾರ್ಯ ಕರ್ತ ಹಾಗೂ ಇನ್ನೋರ್ವನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಇದಲ್ಲದೆ ಇತರ ಎರಡು ಕೇಸುಗಳಲ್ಲೂ ಆರೋಪಿಯಾಗಿರುವ ಈತ ಜಾಮೀನಿನಲ್ಲಿ ಹೊರ ಬಂದ ಬಳಿಕ ತಲೆಮರೆಸಿಕೊಂಡಿದ್ದನು. ಈತನ ಜೊತೆಯಲ್ಲಿ ಆರೋ ಪಿಗಳಾಗಿದ್ದ ಇತರರು ಶಿಕ್ಷೆಗೊಳಗಾಗಿದ್ದು, ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿತ್ತು.