ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣ: ಕಣ್ಣೂರಿನಲ್ಲಿ ಬ್ಯೂಟಿ ಪಾರ್ಲರ್ ಸಂಸ್ಥೆ ಆರಂಭಿಸಿದ್ದ ಆರೋಪಿಗಳು: ಅಲ್ಲಿಂದಲೂ ಮಾಹಿತಿ ಸಂಗ್ರಹ

ಕಾಸರಗೋಡು: ಗಲ್ಫ್ ಉದ್ಯಮಿ ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ ನಿವಾಸಿ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ಯ ವರಿಂದ ಮಂತ್ರವಾದದ ಹೆಸರಲ್ಲಿ 596 ಪವನ್ (4.76 ಕಿಲೋ) ಚಿನ್ನ ಪಡೆದ ಬಳಿಕ ಅದನ್ನು ಅವರು ಹಿಂತಿರುಗಿ ಕೇಳಿದಾಗ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳು ಕಣ್ಣೂರು ಸೌತ್ ಬಜಾರ್‌ನಲ್ಲಿ ಬ್ಯೂಟಿ ಪಾರ್ಲರ್ ಆರಂಭಿಸಿರುವು ದಾಗಿಯೂ ಇದಕ್ಕಾಗಿ ಅವರು 10 ಲಕ್ಷ ರೂ. ವ್ಯಯಿಸಿದ್ದರೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ತನಿಖಾ  ತಂಡ ತಿಳಿಸಿದೆ.

ಇದರ ಹೊರತಾಗಿ ಆರೋಪಿ ಗಳು ಕಣ್ಣೂರು ಪೇಟೆಯಲ್ಲಿ ಅಕ್ಯುಪಂಚರ್ ಕೇಂದ್ರವನ್ನು ಆರಂಭಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಕಣ್ಣೂರಿನಲ್ಲಿ ಆರೋಪಿಗಳು ವಾಸಿಸುತ್ತಿದ್ದ ವಸತಿ ಸಮುಚ್ಛಯದಲ್ಲೂ ತನಿಖಾ ತಂಡ ಪರಿಶೀಲನೆ ನಡೆಸಿದ್ದು, ಅಲ್ಲಿಂದ ಮಂತ್ರವಾದಕ್ಕಾಗಿ ಉಪಯೋಗಿಸುವ ಭಸ್ಮ, ನೂಲು, ತಾಯತ ಇತ್ಯಾದಿ ಸಾಮಗ್ರಿಗಳನ್ನು ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆರೋಪಿಗಳನ್ನು  ನ್ಯಾಯಾಂಗ ಬಂಧನದಿಂದ ಐದು ದಿನಗಳ ತನಕ ತನಿಖಾ ತಂಡಕ್ಕೆ ಬಿಟ್ಟುಕೊಟ್ಟಿದೆ.  ಅದರಂತೆ ತನಿಖಾ ತಂಡ ಆರೋಪಿಗಳನ್ನು ಕಣ್ಣೂರಿ ಗೊಯ್ದು  ಅಲ್ಲಿಂದ ಅಗತ್ಯದ ಮಾಹಿತಿಯನ್ನು ಸಂಗ್ರಹಿಸಿದೆ.

ಕೊಲೆಗೈಯ್ಯಲ್ಪಟ್ಟ ಗಲ್ಫ್ ಉದ್ಯಮಿಯಿಂದ ಮಂತ್ರವಾದದ ಹೆಸರಲ್ಲಿ ಆರೋಪಿಗಳು ಪಡೆದ ೫೯೬ ಪವನ್  ಚಿನ್ನದ ಪೈಕಿ 117 ಪವನ್ ಚಿನ್ನವನ್ನು ಪೊಲೀಸರು ಈಗಾಗಲೇ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಚಿನ್ನವನ್ನು ಆರೋಪಿಗಳು ಕಾಸರಗೋಡು  ನಗರದ ಹಲವು ಚಿನ್ನದಂಗಡಿಗೆ ಮಾರಾಟ ಮಾಡಿ ದ್ದರು. ಮಾತ್ರವಲ್ಲ ಪಳ್ಳಿಕ್ಕೆರೆ ಬಳಿಯ ಕೆಲವು ಬ್ಯಾಂಕ್‌ಗಳಲ್ಲಿ ಅಡವಿರಿಸಿದ್ದರು.  ಉಳಿದ ಚಿನ್ನದ ಪತ್ತೆಗಾಗಿರುವ ಈ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. 2023 ಎಪ್ರಿಲ್ 14ರಂದು ಅಬ್ದುಲ್ ಗಫೂರ್ ಹಾಜಿ ಅವರ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಸಾವು ಕೊಲೆಯಾಗಿತ್ತು ಎಂದು ಸ್ಪಷ್ಟಗೊಂಡಿತ್ತು.

ಉದುಮ ಬಾರ್ ಮೀತ್ತಲ್ ಮಾಂಙಾಡ್ ಕುಳಕುನ್ನಿನಲ್ಲಿ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (ಉಮೈಸ್ ೩೨), ಉಬೈಸ್‌ನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್. (೩೫), ಪೂಚಕ್ಕಾಡ್‌ನ ಅನ್ಸೀಫ ಟಿ.ಎಂ (೩೬) ಮತ್ತು ಮಧೂರು ಕೊಲ್ಯದ ಆಯಿಶ (೪೩) ಎಂಬಿವರು ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page