ಗಲ್ಫ್ ಉದ್ಯಮಿಯನ್ನು ಕೊಲೆಗೈದಿದ್ದು ಮೂವರು ಆರೋಪಿಗಳು-ತನಿಖಾ ತಂಡ
ಕಾಸರಗೋಡು: ಪಳ್ಳಿಕ್ಕರೆ ಪೂಚಕ್ಕಾಡ್ ಫಾರೂಕಿ ಮಸೀದಿ ಸಮೀಪದ ಬೈತುಲ್ ಮಂಜಿಲ್‌ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (೫೫)ರನ್ನು ಮಂತ್ರವಾದದ ಹೆಸರಲ್ಲಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ನಾಲ್ವರು ಆರೋಪಿಗಳ ಪೈಕಿ ಕೊಲೆಯಲ್ಲಿ ನೇರವಾಗಿ ಶಾಮೀಲಾಗಿದ್ದ ಮೂವರು ಆರೋಪಿಗಳು ಮಾತ್ರವೇ ಆಗಿದ್ದಾರೆಂದು ತನಿಖಾ ತಂಡ ತಿಳಿಸಿದೆ.
ಬಂಧಿತ ಆರೋಪಿಗಳ ಪೈಕಿ ಮಧೂರು ಕೊಲ್ಯ ನಿವಾಸಿ ಆಯಿಶಾ (43) ಈ ಕೊಲೆಯಲ್ಲಿ ಶಾಮೀಲಾಗಿಲ್ಲ, ಉಳಿದ ಆರೋಪಿಗಳಾದ ಮಧೂರು ಸಮೀಪದ ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ ಬಾರ ಮೀತಲ್ ಮಾಂಙಾಡ್ ಬೈತುಲ್ ಫಾತಿಮಾದಲ್ಲಿ ವಾಸಿಸುತ್ತಿರುವ ಟಿ.ಎಂ. ಉಬೈಸ್ (ಉಮೈಸ್-32), ಆತನ ಪತ್ನಿ ಮಂತ್ರವಾದಿನಿ ಕೆ.ಎಚ್. ಶಮೀನ (34) ಮತ್ತು ಮಾಕೂಟ್ ಜಿಲಾನಿ ನಗರದಲ್ಲಿ ವಾಸಿಸುತ್ತಿರುವ ಮೂಲತಃ ಪೂಚಕ್ಕಾಡ್ ನಿವಾಸಿ ಸಿ.ಎಂ. ಅಸ್ನಿಫ್ (36) ಎಂಬವರು ಈ ಕೊಲೆಯಲ್ಲಿ ಶಾಮೀಲಾಗಿರುವುದಾಗಿ ತನಿಖಾ ತಂಡ ತಿಳಿಸಿದೆ.
2023 ಎಪ್ರಿಲ್ 13ರಂದು ರಾತ್ರಿ ಅಬ್ದುಲ್ ಗಫೂರ್ ಹಾಜಿಯನ್ನು ಮನೆಯೊಳಗೆ ಕೊಲೆಗೈಯ್ಯಲಾಗಿದೆ. ಅವರ ಮುಖವನ್ನು ಬಟ್ಟೆಯಿಂದ ಮುಚ್ಚಿದ ಬಳಿಕ ತಲೆಯನ್ನು ಗೋಡೆಗೆ ಬಡಿದು ಕೊಲೆಗೈದಿರುವುದಾಗಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾದ ನಾಲ್ವರು ಆರೋಪಿಗಳನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮಂತ್ರವಾದ ಚಿಕಿತ್ಸೆಗಾಗಿ ನೀಡಲಾಗಿದ್ದ 596 ಪವನ್ (4.76 ಕಿಲೋ) ಚಿನ್ನವನ್ನು ಅಬ್ದುಲ್ ಗಫೂರ್ ಹಾಜಿ ಹಿಂತಿರುಗಿ ಕೇಳಿದ್ದರೆಂದೂ ಅದರಿಂದಾಗಿ ಕೊಲೆಗೈಯ್ಯಲಾಯಿ ತೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕ್ರೈಂಬ್ರಾಂಚ್ ಡಿವೈಎಸ್ಪಿ ಕೆ.ಜಿ. ಜೋನ್ಸನ್ ನೇತೃತ್ವದ ತಂಡ ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದೆ.
ಅಬ್ದುಲ್ ಗಫೂರ್ ಹಾಜಿಯಿಂದ ಮಂತ್ರವಾದದ ಹೆಸರಲ್ಲಿ ಆರೋಪಿಗಳು ಪಡೆದ ೫೯೬ ಪವನ್ ಚಿನ್ನದಲ್ಲಿ 29 ಪವನ್ ಚಿನ್ನವನ್ನು ಮಾತ್ರವೇ ಈತನಕ ಪತ್ತೆಹಚ್ಚಲು ತನಿಖಾ ತಂಡಕ್ಕೆ ಸಾಧ್ಯವಾಗಿದೆ. ಚಿನ್ನವನ್ನು ಆರೋಪಿಗಳು ಕಾಸರಗೋಡಿನ ವಿವಿಧ ಚಿನ್ನದಂಗಡಿಗಳಿಗೆ ಮಾರಾಟ ಮಾಡಿದ್ದಾರೆಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳುವ ಯತ್ನವನ್ನು ಕ್ರೈಂ ಬ್ರಾಂಚ್ ಇನ್ನೂ ಮುಂದುವರಿಸಿದೆ.