ಕಾಸರಗೋಡು: ಗುಜರಾತ್ ಹೈಕೋರ್ಟ್ನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಕಾಸರಗೋಡು ನಿವಾಸಿ ರೈಲು ಪ್ರಯಾಣ ಮಧ್ಯೆ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಘಟನೆ ನಡೆದಿದೆ.
ಕಾಸರಗೋಡು ಚಿತ್ತಾರಿಕ್ಕಲ್ ನಿವಾಸಿ ನ್ಯಾಯವಾದಿ ಶೀಜಾ ಗಿರೀಶ್ ನಾಯರ್ (೪೯) ಎಂಬವರು ನಾಪತ್ತೆಯಾದ ವ್ಯಕ್ತಿ. ಕೇಸೊಂದರ ಅಗತ್ಯಕ್ಕಾಗಿ ಶೀಜಾ ಗಿರೀಶ್ ನಾಯರ್ ಕಳೆದ ಸೋಮವಾರ ಬೆಳಿಗ್ಗೆ ೭.೧೦ಕ್ಕೆ ಗುಜರಾತ್ನ ಅಹಮ್ಮದಾಬಾದ್ನಿಂದ ಗುಜರಾತ್ ಎಕ್ಸ್ಪ್ರೆಸ್ ರೈಲಿನಲ್ಲಿ ಮುಂಬೈಗೆಂದು ಪ್ರಯಾಣ ಹೊರಟಿದ್ದರು. ಮಂಗಳವಾರ ನಾನು ಅಹಮ್ಮ ದಾಬಾದ್ಗೆ ಹಿಂತಿರುಗುವುದಾಗಿ ಅವರು ಮನೆಯವರಲ್ಲಿ ತಿಳಿಸಿದ್ದರು. ಸೋಮವಾರ ಮಧ್ಯಾಹ್ನ ೧೨.೩೦ಕ್ಕೆ ಅವರು ಪುತ್ರಿ ಅನುಗ್ರಹಳೊಂದಿಗೆ ಮೊಬೈಲ್ನಲ್ಲಿ ಮಾತನಾಡಿದ್ದರು. ಅಂದು ಅಪರಾಹ್ನ ೩ ಗಂಟೆಗೆ ಶೀಜಾರಿಗೆ ಪುತ್ರಿ ಫೋನ್ ಕರೆಮಾಡಿದಾಗ ಯಾವುದೇ ರೀತಿಯ ಪ್ರತಿಕ್ರಿಯೆ ಲಭಿಸಿರಲಿಲ್ಲ. ಅನಂತರ ರಾತ್ರಿಯಿಂದ ಅವರ ಮೊಬೈಲ್ ಫೋನ್ ಸ್ಪಿಚ್ ಆಫ್ಗೊಂಡ ಸ್ಥಿತಿಯಲ್ಲಿತ್ತು. ಮಂಗಳವಾರವಾದರೂ ಅವರು ಮನೆಗೆ ಹಿಂತಿರುಗಲಿಲ್ಲವೆಂದು ಅವರ ಸಹೋದರ ಶಿಜು ನಾಯರ್ ತಿಳಿಸಿದ್ದಾರೆ. ಇದರಿಂದ ಭಯಗೊಂಡ ಪುತ್ರಿ ಅನುಗ್ರಹ ನಿನ್ನೆ ಅಹಮ್ಮದಾಬಾದ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.
ಶೀಜ ಕಳೆದ ೨೫ ವರ್ಷ ವರ್ಷ ಗಳಿಂದ ಗುಜರಾತ್ ಹೈಕೋರ್ಟ್ನಲ್ಲಿ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅವರು ತಮ್ಮ ಪುತ್ರಿ ಅನುಗ್ರಹ ಮತ್ತು ಪುತ್ರ ಅನುರಾಗ್ ನಾಯರ್ರೊಂದಿಗೆ ಅಹಮ್ಮದಾಬಾದ್ನ ಗೋತಾದಲ್ಲಿ ಖಾಯಂ ಆಗಿ ವಾಸಿಸುತ್ತಿದ್ದಾರೆ. ಶೀಜರ ಪತಿ ಗಿರೀಶ್ ನಾಯರ್ ಏಳು ವರ್ಷಗಳ ಹಿಂದೆ ನಿಧನಹೊಂದಿದ್ದಾರೆ.