ಚಿನ್ನಾಭರಣ ನಿರ್ಮಾಣ ಸಂಸ್ಥೆಯ ಮಾಲಕನ 18 ಲಕ್ಷ ರೂ.ಮೌಲ್ಯದ ಚಿನ್ನ ಸಹಿತ ಪರಾರಿಯಾದ ಯುವತಿಯರು ಕಾಞಂಗಾಡ್ನಿಂದ ಸೆರೆ
ಕಲ್ಲಿಕೋಟೆ: ಚಿನ್ನಾಭರಣ ತಯಾರಿ ಸಂಸ್ಥೆಯ ಮಾಲಕನಿಂದ ಅಪಹರಿಸಿದ 200 ಗ್ರಾಂ ಚಿನ್ನ ಸಹಿತ ಮುಂಬಯಿಗೆ ಪರಾರಿಯಾಗುತ್ತಿದ್ದ ಮಧ್ಯೆ ಇಬ್ಬರು ಯುವತಿಯರನ್ನು ಕಾಞಂಗಾಡ್ನಿಂದ ಬಂಧಿಸಲಾಗಿದೆ. ಮುಂಬಯಿ ಜೋ ಗೇಶ್ವಾರಿ ಸಮರ್ಥ್ ನಗರದ ಶ್ರದ್ಧಾ ರಮೇಶ್ ಯಾನೆ ಫಿರ್ದಾ (37), ಮುಂಬಯಿ ವಾದ್ರ ರಂಜುಗಡ್ ನಗರದ ಸಲ್ಮಾ ಖಾದರ್ ಖಾನ್ (42) ಎಂಬಿ ವರನ್ನು ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್, ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಎಂಬಿವರ ನೇತೃತ್ವದಲ್ಲಿ ಬಂಧಿಸಲಾಗಿದೆ. ಕಲ್ಲಿ ಕೋಟೆ ನಲ್ಲಳದ ಹನೀಫ್ರ ದೂರಿನಂತೆ ನಲ್ಲಳ ಪೊಲೀಸರು ದಾಖಲಿಸಿದ ಕೇಸಿನ ಆರೋಪಿಗಳಾಗಿದ್ದಾರೆ ಇವರಿಬ್ಬರು. ಹನೀಫ್ ಆಭರಣ ನಿರ್ಮಾಣ ಕಂಪೆನಿಯ ಮಾಲಕ ಹಾಗೂ ಕೊಲ್ಲಿ ಯಲ್ಲಿ ವ್ಯಾಪಾರ ಸಂಸ್ಥೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಕೊಲ್ಲಿಯಲ್ಲಿ ಶ್ರದ್ಧಾ ಎಂಬ ಫಿರ್ದಾಳೊಂದಿಗೆ ಹನೀಫ್ಗೆ ಪರಿಚಯವಾಗಿತ್ತು. ಗುರುವಾರ ಕಲ್ಲಿಕೋಟೆಗೆ ತಲುಪಿದ ಫಿರ್ದಾ ಹಾಗೂ ಸಲ್ಮಾಖಾದರ್ ದೂರುದಾರ ನಾದ ಹನೀಫರನ್ನು ಭೇಟಿಯಾಗಿದ್ದರು. 200 ಗ್ರಾಂ ಚಿನ್ನ ಖರೀದಿಸಲೆಂಬ ನೆಪದಲ್ಲಿ ಯುವತಿಯರು ತಲುಪಿದ್ದರು. 18 ಲಕ್ಷ ರೂ. ನೀಡಿ ಖರೀದಿಸಿದ ಚಿನ್ನಾಭರಣವನ್ನು ಮುಂಬೈಯಿಗೆ ತಲುಪಿಸಿದರೆ 60,000 ರೂ. ಲಾಭ ಸಿಗಬಹುದೆಂದು ಯುವತಿಯರು ತಿಳಿಸಿದ್ದಾರೆ. ಆದರೆ ಹಣ ನೀಡದೆ ಇವರು ಪರಾರಿಯಾಗಿರುವುದಾಗಿ ಹನೀಫ ದೂರು ನೀಡಿದ್ದರು. ವ್ಯವಹಾರ ಸಮಯದಲ್ಲಿ ತಾನು ಮೂತ್ರಶಂಕೆಗೆಂದು ದೂರ ನಿಂತಾಗ ಚಿನ್ನಾಭರಣದೊಂದಿಗೆ ಇವರಿಬ್ಬರು ಪರಾರಿಯಾಗಿರುವುದಾಗಿ ಹನೀಫ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕೇಸು ದಾಖಲಿಸಿದ ಪೊಲೀಸರು ಕಣ್ಣೂರು, ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ಕಣ್ಣೂರು ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಎಲ್ಲಾ ವಾಹನಗಳನ್ನೂ ತಪಾಸಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯರು ಬಸ್ನಲ್ಲಿ ಪ್ರಯಾಣ ನಡೆಸಿರಬೇಕೆಂದು ಕಾಸರಗೋಡು ಪೊಲೀಸರು ಶಂಕಿಸಿದ್ದು, ಡಿವೈಎಸ್ಪಿಯ ನಿರ್ದೇಶ ಪ್ರಕಾರ ಹೊಸದುರ್ಗ ಠಾಣೆಯ ಜ್ಯೂನಿಯರ್ ಎಸ್ಐ ವರುಣ್ರ ನೇತೃತ್ವದಲ್ಲಿ ಕಾಞಂ ಗಾಡ್ ಸೌತ್ನಲ್ಲಿ ಬಸ್ಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಯಿತು. ಈ ಮಧ್ಯೆ ಕಲ್ಲಿಕೋಟೆ ನೋಂದಾ ವಣೆಯ ಟ್ಯಾಕ್ಸಿ ಕಾರು ಕಾಞಂಗಾಡ್ನತ್ತ ಸಂಚರಿಸುತ್ತಿದ್ದಾಗ ಶಂಕೆತಾಳಿದ ಎಸ್ಐ ಈ ವಿವರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ತಂಡ ತಲುಪಿ ಹೊಸದುರ್ಗದಲ್ಲಿ ರಸ್ತೆ ತಡೆ ನಿರ್ಮಿಸಿ ಕಾರನ್ನು ವಶಪಡಿಸಿದ್ದಾರೆ. ಪ್ರಯಾಣಿಕರಾದ ಯುವತಿಯರನ್ನು ಮಹಿಳಾ ಪೊಲೀಸರ ಸಹಾಯದೊಂದಿಗೆ ತಪಾಸಣೆ ನಡೆಸಿದಾಗ 200 ಗ್ರಾಂ ಚಿನ್ನಾಭರಣಗಳನ್ನು ಪತ್ತೆಹಚ್ಚಲಾಗಿದೆ. ಯುವತಿಯರು ಸೆರೆಯಾದ ವಿಷಯ ವನ್ನು ನಲ್ಲಳಂ ಪೊಲೀಸರಿಗೆ ತಿಳಿಸಲಾಗಿದೆ. ಇಂದು ಬೆಳಿಗ್ಗೆ ಕಾಞಂಗಾಡ್ಗೆ ತಲುಪಿದ ಪೊಲೀಸರು ಆರೋಪಿಗಳನ್ನು ಕಲ್ಲಿಕೋಟೆಗೆ ಕರೆದುಕೊಂಡು ಹೋಗಿದ್ದಾರೆ. ಮಂಗಳೂರು ಏರ್ಪೋರ್ಟ್ಗೆ ತೆರಳಬೇಕೆಂದು ತಿಳಿಸಿ ವಿನು ಎಂಬವರ ಟ್ಯಾಕ್ಸಿಯಲ್ಲಿ ಯುವತಿಯರು ಸಂಚರಿಸಿದ್ದರು.