ಚಿರತೆ ಭೀತಿ: ವಾಣಿನಗರ, ಕಿನ್ನಿಂಗಾರಿನಲ್ಲಿ ಜನಜಾಗೃತಿ ಸಭೆ, ಪ್ರತಿಭಟನೆ

ಪೆರ್ಲ: ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಕೇರಳ ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ ಬಳಿ ಕಾಡಿಗೆ ಬಿಟ್ಟಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಾಣೀನಗರ ಹಾಗೂ ಕಿನ್ನಿಂಗಾರಿನಲ್ಲಿ ನಿನ್ನೆ ಜನಜಾಗೃತಿ ಸಭೆ ನಡೆಯಿತು.  ವಾಣಿನಗರದಲ್ಲಿ ನಡೆದ ಸಭೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿ, ಚಿರತೆಯ ಬಗ್ಗೆ ಆತಂಕ ಬೇಡ, ಪ್ರಸ್ತುತ ಸಮಸ್ಯೆಗೆ ಸಂಬಂಧಿಸಿ ಅಗತ್ಯವಿದ್ದರೆ ಎರಡೂ ರಾಜ್ಯಗಳ ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಕಾಡು ಪ್ರಾಣಿ ಉಪಟಳದ ಬಗ್ಗೆ ವಿಧಾನಸಭೆಯಲ್ಲಿಯೂ ಧ್ವನಿ ಎತ್ತುವುದಾಗಿ ಅವರು ಭರವಸೆ ನೀಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಕೆ. ಅಶ್ರಫ್, ಕಾಡು ಪ್ರಾಣಿಗಳು ಕಾರಣವಿಲ್ಲದೆ ಮಾನವರ ಮೇಲೆ ದಾಳಿ ನಡೆಸುವುದಿಲ್ಲ. ಚಿರತೆಗಳು ನಿಶಾಚರಿಗಳಾಗಿದ್ದು, ಹಗಲುಹೊತ್ತಿನಲ್ಲಿ ಕಾಡಿನಿಂದ ಹೊರಗೆ ಬರುವುದಿಲ್ಲ. ಆಹಾರ ಅರಸುವ ಚಿರತೆಗಳು ನಾಯಿ, ಕಾಡುಹಂದಿ, ಮುಳ್ಳು ಹಂದಿ ಮೊದಲಾದ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆಯೇ ಹೊರತು ಮನುಷ್ಯ ಮಾಂಸ ಚಿರತೆ ಭಕ್ಷಿಸುವುದಿಲ್ಲವೆಂದು ಅವರು ನುಡಿದರು. ಸಭೆಯಲ್ಲಿ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿ, ಮಾತನಾಡಿ, ಅರಣ್ಯಾಧಿಕಾರಿಗಳು ಜನರ ಭಯ ನಿವಾರಿಸಲು ಪ್ರಯತ್ನಿಸಬೇಕು, ಸುಳ್ಳು ಸುದ್ಧಿಗಳನ್ನು ಹರಿಯಬಿಡಬಾರದು ಎಂದು ನುಡಿದರು. ಹಿರಿಯ ಪತ್ರಕರ್ತ ಶ್ರೀಪಡ್ರೆ, ರೇಂಜ್ ಫಾರೆಸ್ಟ್ ಆಫೀಸರ್ ವಿನೋದ್ ಕುಮಾರ್ ಸಿ.ವಿ., ಸೆಕ್ಷನ್ ಫಾರೆಸ್ಟ್ ಆಫೀಸರ್ ವಿನೋದ್ ಕುಮಾರ್ ಬಿ.ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಮುಖ್ಯೋಪಾಧ್ಯಾಯ ವಾಸುದೇವ ನಾಯಕ್, ವಾರ್ಡ್ ಪ್ರತಿನಿಧಿ ನರಸಿಂಹ ಪೂಜಾರಿ ಎಸ್.ಬಿ, ರಾಮಚಂದ್ರ ಮಾತನಾಡಿದರು.

ಬೆಳ್ಳೂರು ಪಂಚಾಯತ್‌ನ ಕಿನ್ನಿಂಗಾರಿನಲ್ಲಿ ನಡೆದ ಸಭೆಯನ್ನು ಶ್ರೀಪಡ್ರೆ ಉದ್ಘಾಟಿಸಿ ಮಾತನಾಡಿ, ಜನರನ್ನು ಭಯದ ನೆರಳಿನಿಂದ ಮುಕ್ತಗೊಳಿಸಬೇಕು, ಜನರು ಸಂಯಮದಿಂದ ವರ್ತಿಸಬೇಕು ಎಂದು ನುಡಿದರು. ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಮಾತನಾಡಿ, ಈಗಾಗಲೇ ಕಾಡುಪ್ರಾಣಿಗಳ ಉಪಟಳ ವಿಪರೀತವಾಗಿದ್ದು, ಅರಣ್ಯಾಧಿಕಾರಿಗಳು ಚಿರತೆಯನ್ನು ಊರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಆರೋಪಿಸಿದರು. ಕೆ. ಶ್ರೀಕಾಂತ್ ಮಾಡನಾಡಿ, ವಿವಿಧ ಕಡೆಗಳಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚುತ್ತಿರುವುದು ವರದಿಯಾಗಿದ್ದು, ಗಾಯಗೊಂಡ ಚಿರತೆ ಆಕ್ರಮಣಕಾರಿಯಾಗುವ ಸಾಧ್ಯತೆ ಇದೆ. ಕಾಡಿನ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆಯೊಂದಿಗೆ ಮನುಷ್ಯರನ್ನು ಸಂರಕ್ಷಿಸುವ ಜವಾಬ್ದಾರಿ ಕೂಡಾ ಅರಣ್ಯ ಇಲಾಖೆಗೆ ಇದೆ ಎಂದರು. ಡಾ. ಮೋಹನ್ ಕುಮಾರ್ ವೈ.ಎಸ್. ಮಾತನಾಡಿ, ಅರಣ್ಯಾಧಿಕಾರಿಗಳು ಕಾಡು ಪ್ರಾಣಿಗಳಿಗಿಂತಲೂ ಹೆಚ್ಚು ಕ್ರೂರವಾಗಿ ವರ್ತಿಸುತ್ತಿರುವುದಾಗಿ ಆರೋಪಿಸಿದರು. ಪಂಚಾಯತ್ ಉಪಾಧ್ಯಕ್ಷೆ ಗೀತಾ ಕೆ, ಆರ್‌ಎಫ್‌ಒ ವಿನೋದ್ ಕುಮಾರ್ ಸಿ.ವಿ, ಎಸ್‌ಎಫ್‌ಒ ಬಾಬು ಕೆ, ಜಯಕುಮಾರ್, ವಿನೋದ್ ಕುಮಾರ್ ಬಿ.ಎಸ್, ಆರ್‌ಆರ್‌ಟಿ ಅಧಿಕಾರಿಗಳು, ವಿಎಸ್‌ಎಸ್ ಸಮಿತಿ ಅಧ್ಯಕ್ಷ ಜಯಾನಂದ ಕುಳ, ಜನಪ್ರತಿನಿಧಿಗಳಾದ ಜಯಕುಮಾರ್ ಕೆ, ಶ್ರೀಪತಿ ಕಡಂಬಳಿತ್ತಾಯ, ಕೃಷ್ಣ ಶರ್ಮ ಏತಡ್ಕ, ಗೋಪಾಲಕೃಷ್ಣ ಮುಂಡೋಳುಮೂಲೆ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ಮುಂಡಾಸು, ಗಣೇಶ್ ಪ್ರಸಾದ್ ಮಾತನಾಡಿದರು.

You cannot copy contents of this page