ಚುನಾವಣೆ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಹಣ ಜಪ್ತಿ
ಕಾಸರಗೋಡು: ದೇಶದಲ್ಲಿ ಏಳು ಹಂತಗಳಲ್ಲಾಗಿ ನಡೆಯಲಿರುವ ಲೋಕಸಭಾ ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ದೇಶದ ವಿವಿಧೆಡೆಗಳಿಂದಾಗಿ ಚುನಾವಣಾ ಆಯೋಗ ಬರೋಬ್ಬರಿ 4,650 ಕೋಟಿ ರೂ. ವಶಪಡಿಸಿಕೊಂ ಡಿದೆ. ಇದು ದೇಶದ 25 ವರ್ಷದ ಚುನಾವಣಾ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಒಟ್ಟು ಅಕ್ರಮದಲ್ಲಿ 2069 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು (ಡ್ರಗ್ಸ್) ಕೂಡಾ ಸೇರಿವೆ. 2019ರ ಚುನಾವಣೆಯಲ್ಲಿ ಚುನಾವಣಾ ಆಯೋಗ ಮಾರ್ಚ್ 1ರಿಂದ ಇಡೀ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ 3,475 ಕೋಟಿ ರೂ. ವಶಪಡಿಸಿಕೊಂಡಿದೆ. ಆದರೆ ಈ ಚುನಾವಣೆಯಲ್ಲಿ ಈ ತನಕ ಅದಕ್ಕಿಂತಲೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೊಂದು ಹೊಸ ದಾಖಲೆಯಾಗಿದೆ ಎಂದು ಆಯೋಗ ಹೇಳಿದೆ.