ಡ್ರಗ್ಸ್ ಮಾಫಿಯಾ ಅಂತಾರಾಷ್ಟ್ರೀಯ ಕೈವಾಡವಿದೆ- ಬಿಜೆಪಿ ಆರೋಪ
ಮಂಜೇಶ್ವರ: ಉಪ್ಪಳ ಸಹಿತ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿರುವ ಮಾದಕ ವಸ್ತು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಕೇರಳದ ಗಡಿ ಪ್ರದೇಶವಾದ ಮಂಜೇಶ್ವರ, ಉಪ್ಪಳ ಭಾಗಗಳಲ್ಲಿ ಮಾದಕ ವಸ್ತು ಸಂಗ್ರಹ ಹಾಗೂ ಮಾರಾಟ ಭಯಾನಕವಾದ ರೀತಿಯಲ್ಲಿ ನಡೆಯುತ್ತಿದ್ದರು. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಹಾಗೂ ನಾರ್ಕೋಟಿಕ್ ಸೆಲ್ ವಿಫಲವಾಗಿದೆ ಎಂದು ಅವರು ಆಪಾದಿಸಿದ್ದಾರೆ. ಉಪ್ಪಳದ ಮನೆಯೊಂದರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಪತ್ತೆಹಚ್ಚಲಾಗಿದೆ. ಈ ಪ್ರದೇಶದಲ್ಲಿ ಡ್ರಗ್ಸ್ಮಾಫಿಯಾ ನಿರಾತಂಕವಾಗಿ ನಡೆಯುತ್ತಿದ್ದು ಇದರ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಇನ್ನೂ ಕಣ್ಣುಮುಚ್ಚಾಲೆ ನಡೆಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಉಪ್ಪಳದ ಡ್ರಗ್ಸ್ನ ಹಿಂದೆ ಅಂತಾರಾಷ್ಟ್ರೀಯ ಕೈವಾಡವಿದೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ. ಇದರ ಹಿಂದಿರುವ ಎಲ್ಲರನ್ನೂ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.