ಢಾಣಾ ಚಂಡಮಾರುತ: ರೆಡ್ ಅಲರ್ಟ್ ಘೋಷಣೆ
ಕೊಲ್ಕತ್ತಾ: ಬಂಗಾಳ ಕೊಲ್ಲಿಯಲ್ಲಿ ಢಾಣಾ ಚಂಡಮಾರುತ ರೂಪುಗೊಂಡಿದ್ದು, ಇದು ಒಡಿಶ್ಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ಈಗ ಸಮೀಪಿಸತೊಡಗಿದೆ. ನಾಳೆ ಈ ಚಂಡಮಾರುತ ಕರಾವಳಿ ಪ್ರವೇಶಿಸಲಿದೆ. ಆ ಹಿನ್ನೆಲೆಯಲ್ಲಿ ಒಡಿಶ್ಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯೊಂದಿಗೆ ಭೂ ಕುಸಿತ ಸಾಧ್ಯತೆಯೂ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದರಿಂದಾಗಿ ಈ ಎರಡೂ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಕೊಲ್ಕತ್ತಾ ಮತ್ತು ಭುವನೇಶ್ವರ ವಿಮಾನ ನಿಲ್ದಾಣಗಳಲ್ಲಿ ಇಂದು ಸಂಜೆಯಿಂದ ನಾಳೆ ಬೆಳಿಗ್ಗೆ 9 ಗಂಟೆ ವರೆಗೆ 16 ತಾಸುಗಳ ಕಾಲ ವಿಮಾನ ಸೇವೆ ಸ್ಥಗಿತಗೊಳಿಸಲಾ ಗಿದೆ. 10 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸ ಲಾಗಿದೆ. 120 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ಚಂಡಮಾರುತ ಬೀಸಲಿದ್ದು, ಅದು ಭಾರೀ ಭೂಕುಸಿತಕ್ಕೂ ದಾರಿ ಮಾಡಿಕೊಡಲಿದೆ. ಅದರಿಂದಾಗಿ ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳದ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬೆರೆಡೆಗೆ ಸ್ಥಳಾಂತರಿಸಿ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಚಂಡಮಾರುತ ಹಿನ್ನೆಲೆಯಲ್ಲಿ 190 ರೈಲು ಸೇವೆಗಳನ್ನೂ ನಾಳೆ ತನಕ ರದ್ದುಪಡಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಮಾತ್ರವಲ್ಲ 14 ಜಿಲ್ಲೆಗಳ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.