ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪ್ರಕರಣ: ಮಗ ತಪ್ಪಿತಸ್ಥ

ಕಾಸರಗೋಡು: ಕಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಯಾ ಗಿರುವ ಮಗನ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥನೆಂದು ವಿಚಾರಣಾ ನ್ಯಾಯಾಲಯವಾದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ಮೀಸಲಿರಿಸಿದೆ.

ಮಾಲೋಂ ಅದಿರಾಂಬು ಕಾಲ ನಿಯ ಪಾಪಿನ್ ವೀಡಿಲ್ ಅನೀಶ್ (36) ಈ ಪ್ರಕರಣದ ಆರೋಪಿ ಯಾಗಿದ್ದಾನೆ.  ೨೦೧೯ ಜೂನ್ ೨೮ರಂದು ರಾತ್ರಿ 11.45ರ ವೇಳೆ   ತಂದೆ ದಾಮೋದರನ್ (62)ರನ್ನು ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಆರೋಪದಂತೆ ಅನೀಶ್ ವಿರುದ್ಧ ಚಿತ್ತಾರಿಕ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಘಟನೆ ನಡೆದ ದಿನದಂದು ಆರೋಪಿ ಮುಳ್ಳೇರಿಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಮದ್ಯ ಖರೀದಿಸಿ ಮನೆಗೆ ಬಂದಿದ್ದನು. ಅದನ್ನು ಆರೋಪಿ ಹಾಗೂ ಆತನ ತಂದೆ ಜೊತೆಯಲ್ಲಿ ಕುಳಿತು ಸೇವಿಸಿದ್ದರು. ಮದ್ಯದಮಲಿನಲ್ಲಿ ದಾಮೋದರನ್ ಅಲ್ಲೇ ಇದ್ದ ಕತ್ತಿ ತೆಗೆದು ಆತನ ಪತ್ನಿ ರಾಧಾಮಣಿ ಮೇಲೆ ಹಲ್ಲೆ ನಡೆಸಲೆತ್ನಿಸಿದ್ದನು. ಅದನ್ನು ಅನೀಶ್ ತಡೆಯಲೆತ್ನಿಸಿದ ವೇಳೆ ಆತನ ಕೈಗೆ ಗಾಯ ಉಂಟಾಗಿತ್ತು. ಆ ದ್ವೇಷದಿಂದ ಆರೋಪಿ ಅನೀಶ್  ಮನೆಯ ಹೊರಗಿನ ಶೆಡ್‌ನಿಂದ ಕಟ್ಟಿಗೆ  ತಂದು ತಂದೆಗೆ ಹೊಡೆದು ಕೊಲೆಗೈದನೆಂದು ಪೊಲೀಸರು ದಾಖಲಿಸಿದ ಕೇಸಿನಲ್ಲಿ ಆರೋಪಿಸಲಾಗಿದೆ.

ವಿಚಾರಣೆ ವೇಳೆ ಸಾಕ್ಷಿದಾರರು ನಿಷ್ಠೆ ಬದಲಾಯಿಸಿ   ಹೇಳಿಕೆ ನೀಡಿದ್ದರು. ಆದರೆ ಸಾಂದರ್ಭಿಕ ಹಾಗೂ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಆರೋಪಿಯ ಮೇಲಿನ ಆರೋಪ ಸಾಬೀತುಗೊಂಡಿದೆ ಯೆಂದು ಆದ್ದರಿಂದ ಆತ ತಪ್ಪಿತಸ್ಥನೆಂದು ನ್ಯಾಯಾಲಯ ಕೊನೆಗೆ ತೀರ್ಪು ನೀಡಿದೆ.  ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ೨೪ ಸಾಕ್ಷಿದಾರರು ಹಾಗೂ 39 ದಾಖಲುಪತ್ರಗಳನ್ನು  ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಅಂದು ಚಿತ್ತಾರಿಕ್ಕಲ್ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಕೆ.ಪಿ. ವಿನೋದ್ ಕುಮಾರ್ ಈ ಕೊಲೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಗವರ್ನ್‌ಮೆಂಟ್ ಆಂಡ್ ಪಬ್ಲಿಕ್ ಪ್ರೋಸಿಕ್ಯೂಟರ್ ಇ. ಲೋಹಿತಾಕ್ಷನ್ ಮತ್ತು ಆದಿರಾ ಬಾಲನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಪ್ರಾಯಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದರಲ್ಲೂ ಅನೀಶ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page