ತಾಯಿಯನ್ನು ಕಿಚ್ಚಿಟ್ಟು ಕೊಲೆ: ಬಂಧಿತ ಪುತ್ರನ ಸಮಗ್ರ ತನಿಖೆ

ಮಂಜೇಶ್ವರ:  ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿನ ದಿ| ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯಾದ ಪುತ್ರ ಮೆಲ್ವಿನ್ ಮೊಂತೇರೋ (33)ನನ್ನು ಮಂಜೇಶ್ವರ ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿದ್ದಾರೆ. ಆರ್ಥಿಕ ಸಂದಿಗ್ಧತೆಯೇ ಕೊಲೆಗೆ ಕಾರಣವೆಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲಸವಿಲ್ಲದೆ ಸಮಸ್ಯೆಗೀಡಾದ ಆರೋಪಿ ತನ್ನ ತಾಯಿಯಿಂದ ಜಮೀನು ಅಡವಿರಿಸಿ 1 ಲಕ್ಷ ರೂಪಾಯಿ ಸಾಲ ಪಡೆದು ನೀಡುವಂತೆ ತಿಳಿಸಿದ್ದನೆಂದೂ ಆದರೆ ಅದಕ್ಕೆ ತಾಯಿ ಒಪ್ಪದಿರುವುದೇ ಈ ಕೊಲೆ ಕೃತ್ಯಕ್ಕೆ ಕಾರಣವಾಗಿದೆಯೆಂದು ಆರೋಪಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಯನ್ನು ಸಮಗ್ರ ತನಿಖೆ ಗೊಳಪಡಿಸಿದ ಬಳಿಕ ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಮುಂಜಾನೆ ವೇಳೆ ಮನೆಯಲ್ಲಿ ನಿದ್ರಿಸಿದ್ದ ಹಿಲ್ಡಾ ಮೊಂತೇರೋರನ್ನು ಪುತ್ರ ಮೆಲ್ವಿನ್ ಮೊಂತೇರೋ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈದಿರುವುದಾಗಿ ತಿಳಿದುಬಂದಿದೆ.

ನಿನ್ನೆ ಮುಂಜಾನೆ ೧.೩೦ರ ವೇಳೆ ಮೆಲ್ವಿನ್ ಮೊಂತೇರೋ ನೆರೆಮನೆ ನಿವಾಸಿ ಸಂಬಂಧಿಕರಾದ ವಿಕ್ಟರ್‌ರ ಮನೆಗೆ ತೆರಳಿ ತಾಯಿಗೆ ಸೌಖ್ಯವಿಲ್ಲವೆಂದೂ ಕೂಡಲೇ ಮನೆಗೆ ಬರಬೇಕೆಂದು ವಿಕ್ಟರ್‌ರ ಪತ್ನಿ ಲೋಲಿಟರಲ್ಲಿ ತಿಳಿಸಿದ್ದನು.  ಇದರಂತೆ  ಲೋಲಿಟಾ ಆತನ ಜತೆ ಮನೆಗೆ  ತಲುಪಿದೊಡನೆ ಆಕೆಯ  ಮೇಲೆ ಹಲ್ಲೆಗೈದು ಬಳಿಕ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಮೆಲ್ವಿನ್ ಪರಾರಿಯಾಗಿದ್ದನು. ಲೋಲಿಟಾರ ಬೊಬ್ಬೆ ಕೇಳಿ ನೆರೆ ಮನೆ ನಿವಾಸಿಗಳು ತಲುಪಿದಾಗಲೇ ವಿಷಯ ಬೆಳಕಿಗೆ ಬಂದಿದೆ. ಬಳಿಕ ನಾಗರಿಕರು ನಡೆಸಿದ ಶೋಧ ವೇಳೆ ಹಿಲ್ಡಾ ಮೊಂತೇರೋರ ಮೃತದೇಹ ಮನೆ ಸಮೀಪದ ಪೊದೆಗಳೆಡೆ ಪತ್ತೆಯಾಗಿದೆ.

ಇದೇ ವೇಳೆ ತಲೆಮರೆಸಿಕೊಂಡಿದ್ದ ಆರೋಪಿ ಮೆಲ್ವಿನ್ ಮೊಂ ತೇರೋನನ್ನು ಪೊಲೀಸರು ಗಂಟೆಗಳೊಳಗೆ ಕುಂದಾಪುರ ಬಳಿಯಿಂದ ಸೆರೆಹಿಡಿದಿದ್ದಾರೆ.  ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

RELATED NEWS

You cannot copy contents of this page