ದೇವಸ್ವಂ ಮಂಡಳಿಗೆ ಆರು ಕೋಟಿ ನಷ್ಟ: ಶಬರಿಮಲೆಯಲ್ಲಿ ರಾಶಿ ಬಿದ್ದಿರುವ ಅರವಣ ಪ್ರಸಾದ ತೆರವುಗೊಳಿಸಲು ಸುಪ್ರೀಂಕೋರ್ಟ್ ಅನುಮತಿ
ಪತ್ತನಂತಿಟ್ಟ: ೬.೬೫ ಲಕ್ಷ ಟಿನ್ ಅರವಣ ಪ್ರಸಾದವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ರಾಜ್ಯ ಸರಕಾರದೊಂದಿಗೆ ಅವಲೋಕನ ನಡೆಸಿ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ತಿರುವಿದಾಂಕೂರ್ ದೇವಸ್ವಂ ಬೋರ್ಡ್ಗೆ ನ್ಯಾಯಾಧೀಶ ಎ.ಎಸ್.ಬೋಪಣ್ಣ ಅಧ್ಯಕ್ಷರಾಗಿರುವ ವಿಭಾಗೀಯ ಪೀಠ ನಿರ್ದೇಶಿಸಿದೆ.
ಕೀಟನಾಶಕ ಸೇರಿಕೊಂಡಿ ದೆಯೆಂಬ ದೂರಿನಂತೆ ೬.೬೫ ಲಕ್ಷ ಟಿನ್ ಪ್ರಸಾದವನ್ನು ಈರೀತಿ ತೆರವುಗೊಳಿಸಬೇಕಾಗಿ ಬಂದಿದೆ. ಇದರಿಂದ ಆರು ಕೋಟಿ ರೂಪಾಯಿ ದೇವಸ್ವಂ ಮಂಡಳಿಗೆ ನಷ್ಟವುಂಟಾಗಿದೆ. ದೇವಸ್ವಂ ಬೋರ್ಡ್ ನೀಡಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಿ ಈ ತೀರ್ಪು ನೀಡಿದೆ. ಈ ಪ್ರಸಾದವನ್ನು ಉಪಯೋಗಿಸಬಹುದೆಂದು ಪತ್ತೆಹಚ್ಚಲಾಗಿದ್ದರೂ ಕಳೆದ ೯ ತಿಂಗಳ ಹಿಂದೆ ತಯಾರಿಸಿದ ಕಾರಣ ಇದನ್ನು ಇನ್ನು ವಿತರಿಸಲು ಸಾಧ್ಯವಿಲ್ಲವೆಂದು ಬೋರ್ಡ್ಗೆ ಬೇಕಾಗಿ ಹಾಜರಾದ ನ್ಯಾಯವಾದಿ ವಿ. ಗಿರಿ, ನ್ಯಾಯವಾದಿ ಪಿ.ಎಸ್. ಸುಧೀರ್ ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಪ್ರಸಾದವನ್ನು ತೆರವುಗೊಳಿಸಲು ಆದೇಶಿಸಿದೆ. ಇದೇ ವೇಳೆ ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿ ವಾಣಿಜ್ಯ ವ್ಯವಹಾರದಲ್ಲಿ ಹೈಕೋರ್ಟ್ ಸ್ವೀಕರಿಸಿದ ಕ್ರಮದಲ್ಲಿ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಪ್ರತೀಕಾರ ಉದ್ದೇಶದಿಂದ ಹೈಕೋರ್ಟ್ಗೆ ದೂರು ನೀಡಿದ ಅಯ್ಯಪ್ಪ ಸ್ಪೈಸಸ್ ನಿಂದ ಹಾನಿಯಾದ ಅರವಣ ಪ್ರಸಾದದ ವೆಚ್ಚವನ್ನು ವಸೂಲಿ ಮಾಡ ಬೇಕೆಂದು ಬೋರ್ಡ್ ಆಗ್ರಹಿಸಿತ್ತು.
ಆದರೆ ಅರವಣ ವಿತರಣೆ ತಡೆಯಬೇಕೆಂದು ನಾವು ಆಗ್ರಹಿಸಿರಲಿಲ್ಲವೆಂದು ಅಯ್ಯಪ್ಪ ಸ್ಪೈಸಸ್ ಪರವಾಗಿ ಹಾಜರಾದ ನ್ಯಾಯವಾದಿ ಎಂ.ಆರ್. ಅಭಿಲಾಷ್ ಸ್ಪಷ್ಟಪಡಿಸಿದ್ದಾರೆ. ನವಂಬರ್ ೧೭ರಂದು ತೀರ್ಥಾಟನೆ ಆರಂಭಗೊಳ್ಳಲಿರುವ ಮಧ್ಯೆ ಇದರ ಒಂದು ತಿಂಗಳ ಮುಂಚಿತ ಅರವಣ ಪ್ರಸಾದ ತಯಾರಿಸಿ ಸಂಗ್ರಹಿಸ ಬೇಕಾಗಿದೆ.
ಹಳೆಯ ಪ್ರಸಾದ ಇಲ್ಲಿ ಸಂಗ್ರಹಿಸಿಟ್ಟಿರುವ ಕಾರಣ ಸ್ಥಳದ ಅಭಾವವಿದೆಯೆಂದು ಬೋರ್ಡ್ ನ್ಯಾಯಾಲಯವನ್ನು ಸಮೀಪಿಸಿದ್ದು, ಅದನ್ನು ತೆರವುಗೊಳಿಸಲು ಈಗ ಆದೇಶಿಸಲಾಗಿದೆ. ಆದರೆ ಅದನ್ನು ಹೇಗೆ ನಾಶಪಡಿಸುವುದೆಂಬುವುದು ಮುಂದಿನ ಸಮಸ್ಯೆಯಾಗಿ ಉಳಿದಿದೆ.