ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರ ಪತ್ತೆಗಾಗಿ ಆಪರೇಷನ್ ಸರ್ಚ್ ಡ್ರೈವ್
ನವದೆಹಲಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳು ಸೇರಿದಂತೆ ಮತೀಯ ಅಲ್ಪ ಸಂಖ್ಯಾತರ ಮೇಲೆ ಅಲ್ಲಿನ ಮತೀಯ ಮೂಲಭೂತವಾದಿ ಶಕ್ತಿಗಳು ವ್ಯಾಪಕ ದೌರ್ಜನ್ಯ, ಕೊಲೆ ಇತ್ಯಾದಿ ಹಿಂಸೆಗಳನ್ನು ನಡೆಸುತ್ತಿರುವ ವೇಳೆಯಲ್ಲೇ ಇನ್ನೊಂದೆಡೆ ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರೀ ಸಂಖ್ಯೆಯಲ್ಲಿ ಭಾರತದೊಳಗೆ ನುಸುಳುತ್ತಿರುವುದು ಹೆಚ್ಚಾಗತೊಡಗಿದ್ದು, ಅದರಿಂದಾಗಿ ಅವರನ್ನು ಪತ್ತೆಹಚ್ಚಿ ಗಡಿಪಾರು ಮಾಡ ಲು ಪೊಲೀಸರು ಸರ್ಚ್ ಆರಪೇಷನ್ ಡ್ರೈವ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದರಂತೆ ವಿಶೇಷವಾಗಿ ದೆಹಲಿ ಸೇರಿದಂತೆ ಭಾರತದ ದೊಡ್ಡ ನಗರಗಳಲ್ಲಿ ಪೊಲೀಸರು ಮನೆಮನೆಗಳಿಗೆ ತೆರಳಿ ತಪಾಸಣೆ ಆರಂಭಿಸಿದ್ದಾರೆ. ಅತಿಕ್ರಮಗಳನ್ನು ತಡೆಗಟ್ಟಲು ಹಾಗೂ ಅಕ್ರಮವಾಗಿ ಪಡೆದ ಸರಕಾರಿ ದಾಖಲೆಪತ್ರಗಳನ್ನು ರದ್ದುಪಡಿಸುವ ಹಾಗೂ ನುಸುಳುಕೋರರನ್ನು ಹೊರದಬ್ಬುವ ಅಗತ್ಯದ ಕ್ರಮವನ್ನೂ ಆರಂಭಿಸಿದ್ದಾರೆ.
ಬಾಂಗ್ಲಾ ದೇಶದ ನುಸುಳುಕೋರರು ಅಕ್ರಮವಾಗಿ ಭಾರತೀಯ ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ ಸರಕಾರಿ ಗುರುತುಪತ್ರಗಳನ್ನು ಅಕ್ರಮವಾಗಿ ಪಡೆದು ಭಾರತದ ವಿವಿಧ ರಾಜ್ಯಗಳಿಗೆ ಸಾಗಿ ನಾವು ಪಶ್ಚಿಮ ಬಂಗಾಳದವರಾಗಿದ್ದೇವೆಂಬ ಸೋಗಿನಲ್ಲಿ ಅಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೂ ಸ್ಪಷ್ಟ ಮಾಹಿತಿ ಲಭಿಸಿದೆ. ಇಂತಹ ನುಸುಳುಕೋರರಲ್ಲಿ ಭಯೋತ್ಪಾದಕರೂ ಒಳಗೊಂಡಿರುವ ಬಗ್ಗೆಯೂ ಗುಪ್ತಚರ ವಿಭಾಗ ಶಂಕೆ ವ್ಯಕ್ತಪಡಿಸಿದೆ. ಅದರಿಂದಾಗಿ ಕೇಂದ್ರ ಮಾತ್ರವಲ್ಲ ರಾಜ್ಯ ಗುಪ್ತಚರ ವಿಭಾಗಗಳೂ ಈ ಬಗ್ಗೆ ಇನ್ನೊಂದೆಡೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.