ಧಾರಾಕಾರ ಮಳೆ: ರಾಜ್ಯದ ಹಲವೆಡೆಗಳಲ್ಲಿ ಪ್ರವಾಹ ಭೀತಿ ; ನಾಲ್ಕು ಅಣೆಕಟ್ಟುಗಳ ಶಟರ್ ಓಪನ್, ಜಿಲ್ಲೆ ಸೇರಿ ರಾಜ್ಯದಲ್ಲಿ ಮತ್ತೆ ಆರು ಮಂದಿ ಬಲಿ

ಕಾಸರಗೋಡು: ಮುಂಗಾರು ಮಳೆ ಇನ್ನಷ್ಟು ಬಿರುಸುಕೊಳ್ಳುತ್ತಿರು ವಂತೆಯೇ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಧಾರಾಕಾರ ಮಳೆ ಸೃಷ್ಟಿಸಿದ ಪ್ರಾಕೃತಿಕ ದುರಂತಕ್ಕೆ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರು ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಈತನಕ ಪ್ರಾಕೃತಿಕ ದುರಂತಕ್ಕೆ ಬಲಿಯಾದವರ ಸಂಖ್ಯೆ ೨೨ಕ್ಕೇರಿದೆ.

ಕಾಸರಗೋಡು ಜಿಲ್ಲೆಯ ಮಲ್ಲ ಕ್ಷೇತ್ರ ಸಮೀಪದ ಮಧುವಾಹಿನಿ ಹೊಳೆಗೆ ನಿನ್ನೆ ಬಟ್ಟೆ ಒಗೆಯಲು ಹೋದ ಮಹಿಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮಲ್ಲ ಸೇತುವೆ ಬಳಿಯ ದುರ್ಗಾಂಬಾ ನಿಲಯದ ಎಂ. ಗೋಪಿ (75) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಬೆಳಿಗ್ಗೆ ಬಟ್ಟೆ ಒಗೆಯಲೆಂದು ಮನೆ ಪಕ್ಕದ  ಹೊಳೆ ಬದಿ ಹೋಗಿದ್ದರು. ತಡವಾದರೂ  ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಶೋಧ ನಡೆಸಿದಾಗ ಸುಮಾರು ೩ ಕಿಲೋ ಮೀಟರ್ ದೂರದ ಮುಂಡಪ್ಪಳ್ಳ ಕಟ್ಟದ ಬಳಿ ಗೋಪಿಯವರ ಮೃತದೇಹ ಪತ್ತೆಯಾಗಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

ದಿ| ಎಂ. ನಾರಾಯಣ ಮಣಿಯಾಣಿಯವರ ಪತ್ನಿಯಾದ ಗೋಪಿ ಮಕ್ಕಳಾದ  ಬಾಲಕೃಷ್ಣನ್, ರಾಜೀವಿ, ಕುಸುಮ, ಮಾಲಿಂಗ, ಮಧು, ಸುಧನ್, ಅಳಿಯ ಮತ್ತು ಸೊಸೆಯಂದಿರಾದ  ಬಾಲಕೃಷ್ಣನ್, ಉಮೇಶನ್, ಚಂದ್ರಾವತಿ, ದಿವ್ಯ, ರೇಖ, ಅನಿಲ, ಸಹೋದರ ಕೃಷ್ಣನ್, ಸಹೋದರಿ ಚೋಮು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇದೇ ರೀತಿ ಪ್ರಾಕೃತಿಕ ವಿಕೋಪಕ್ಕೆ ಆಲಪ್ಪುಳದಲ್ಲಿ ಕಾಲು ಜಾರಿ ನೀರಿನ ಕಾಲುವೆಗೆ ಬಿದ್ದು ಹೌಸ್ ಬೋಟ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪುನ್ನಪ್ರಂ ಎಂಬಲ್ಲಿ ನೀರಿನ ಹೊಂಡದಲ್ಲಿ  ಮೀನು ಹಿಡಿಯಲು ಹೋದ ಐದು ವರ್ಷ ಪ್ರಾಯದ ಬಾಲಕ ನೀರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಇಡುಕ್ಕಿ  ಕುಮಳಿಯಲ್ಲಿ ಲಾರಿ ಮೇಲೆ ಮರ ಬಿದ್ದು ಕೋಟ್ಟಯಂ ನಿವಾಸಿ ಯುವಕನೋರ್ವ ಸಾವನ್ನಪ್ಪಿದ್ದಾರೆ.

ವಿಳಿಂಞ ಎಂಬಲ್ಲಿ ತೆಂಗಿನ ಮರವೊಂದು ದೇಹದ ಮೇಲೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆಯೂ ನಡೆದಿದೆ.

ಧಾರಾಕಾರ ಮಳೆಗೆ ಕಾಸರಗೋಡು-ಹೊಸದುರ್ಗ ರಾಜ್ಯ ಹೆದ್ದಾರಿಯ  ಗುಡ್ಡೆ ಕುಸಿದು ಬಿದ್ದಿದೆ.   ಇಡುಕ್ಕಿ ಜಿಲ್ಲೆಯ ಪೊನ್ಮಡಿ, ಪಾಂಬ್ಲಾ, ಕಲ್ಲರ್‌ಕುಟ್ಟಿ ಮತ್ತು ಮಯಂಗರ ಅಣೆಕಟ್ಟುಗಳಲ್ಲಿ ಮಳೆ ನೀರು ತುಂಬಿತುಳುಕುವ ಸ್ಥಿತಿಗೆ ತಲುಪಿದ್ದು, ಅದರಿಂದಾಗಿ ಈ ನಾಲ್ಕು ಅಣೆಕಟ್ಟುಗಳ ಶೆಟರ್‌ಗಳನ್ನು ತೆರೆದು ನೀರು ಹೊರ ಬಿಡಲಾಗುತ್ತಿದೆ. ಈ ಪ್ರದೇಶದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ.

RELATED NEWS

You cannot copy contents of this page