ನಗರಸಭಾ ಅಧ್ಯಕ್ಷರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಕಾಸರಗೋಡು: ನಗರಸಭಾ ಅಧ್ಯಕ್ಷರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿ ಮಾವೋವಾದಿ ಕಮಾಂಡರ್‌ನನ್ನು ಪೊಲೀಸರು ನಿನ್ನೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಹಾಜರು ಪಡಿಸಿದ್ದಾರೆ. ಮಾವೋವಾದಿಯ ಕಬನಿದಳ ಕಮಾಂಡರ್ ಕಲ್ಪೆಟ್ಟಾ ನಿವಾಸಿ ಸೋಮನ್‌ನನ್ನು ಈ ರೀತಿ ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗಿದೆ. ನ್ಯಾಯವಾದಿ ಎಸ್.ಪಿ. ಖಾಲೀದ್‌ರವರು ಈ ಹಿಂದೆ ಹೊಸದುರ್ಗ ನಗರಸಭೆಯ ಅಧ್ಯಕ್ಷರಾಗಿದ್ದ ವೇಳೆ ೨೦೦೭ರಲ್ಲಿ ಅಕ್ರಮವಾಗಿ ಅವರ ಕಚೇರಿಗೆ ನುಗ್ಗಿ ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸೋಮನ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಕಾನೂನು ಉಲ್ಲಂಘಿಸಿ ಕಟ್ಟಡವೊಂದಕ್ಕೆ ಲೈಸನ್ಸ್ ನೀಡಲಾಗಿದೆ ಎಂದು ಆರೋಪಿಸಿ ಸೋಮನ್ ಸೇರಿದಂತೆ ಒಂದು ತಂಡ ನಗರಸಭಾ ಅಧ್ಯಕ್ಷ ಕಚೇರಿಗೆ ಅಕ್ರಮವಾಗಿ ನುಗ್ಗಿ ಬಂದು ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿತ್ತು. ನಂತರ ಸೋಮನ್ ಮತ್ತು ಇತರರು ಅಲ್ಲಿಂದ ತಪ್ಪಿಸಿಕೊಂಡಿದ್ದರು.
ಬಳಿಕ ಕಳೆದ ಜುಲೈ ೨೮ರಂದು ಶೊರ್ನೂರು ರೈಲು ನಿಲ್ದಾಣ ಪರಿಸರದಿಂದ ಸೋಮನ್‌ನನ್ನು ನಕ್ಸಲ್ ನಿಗ್ರಹ ದಳ ಬಂಧಿಸಿತ್ತು. ನಂತರ ಆತನನ್ನು ವಿಯೂರ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಅಲ್ಲಿಂದ ಆತನನ್ನು ಮತ್ತೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ನಿನ್ನೆ ಕಾಸರಗೋಡು ನ್ಯಾಯಾಲಯಕ್ಕೆ ತಂದು ಹಾಜರುಪಡಿಸಿ, ನಂತರ ಆತನನ್ನು ಮತ್ತೆ ವಿಯೂರ್ ಸೆಂಟ್ರಲ್ ಜೈಲಿಗೆ ಹಿಂತಿರುಗಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಲಯ ನವೆಂಬರ್ ೭ರಂದು ಮತ್ತೆ ಪರಿಗಣಿಸಲಿದೆ. ಸೋಮನ್ ವಿರುದ್ಧ ಕಾಸರಗೋಡು ಮಾತ್ರವಲ್ಲದೆ, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲ್ಘಾಟ್ ಜಿಲ್ಲೆಗಳಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿ ಒಟ್ಟು ೬೬ ಪ್ರಕರಣಗಳು ದಾಖಲುಗೊಂಡಿವೆ.