ನವಜಾತ ಶಿಶುವನ್ನು ಗದ್ದೆಯಲ್ಲಿ ಹೂತು ಹಾಕಿದ ಪ್ರಕರಣ: ಆರೋಪಿಗಳಿಬ್ಬರನ್ನು ಕಸ್ಟಡಿಗೆ ಪಡೆದ ಪೊಲೀಸರು
ಆಲಪ್ಪುಳ: ಚೇರ್ತಲ ಪಾಣಾವಳ್ಳಿಯ ನಿವಾಸಿ ಅವಿವಾಹಿತ ಯುವತಿ ಹೆತ್ತ ನವಜಾತ ಶಿಶುವನ್ನು ಹೂತು ಹಾಕಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೂಚಕ್ಕಾಲ್ ಪೊಲೀಸರು ಐದು ದಿನಕ್ಕೆ ಕಸ್ಟಡಿಗೆ ಪಡೆದಿದ್ದಾರೆ. ದ್ವಿತೀಯ ಆರೋಪಿ ತಗಳಿ ವಿರುಪ್ಪಾಲ ಥೋಮಸ್ ಜೋಸೆಫ್ (24), ಈತನ ಗೆಳೆಯ ಮೂರನೇ ಆರೋಪಿಯಾದ ಪೊನ್ನುಮ್ಮ ಜೋಸೆಫ್ ನಿವಾಸದ ಅಶೋಕ್ ಜೋಸೆಫ್ ಎಂಬಿವರನ್ನು ಕಸ್ಟಡಿಗೆ ಪಡೆದಿದ್ದಾರೆ. ಆನಮೂಟ್‌ಚ್ಚಿರ ನಿವಾಸಿ ಡೋಣಾ ಜೋಜಿ (22)ಳ ಮಗುವನ್ನು ತಗಳಿ ಕುನ್ನುಮ್ಮ ಕೊಲ್ಲನಾಡಿ ಗದ್ದೆಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಹೆರಿಗೆ ಆದ ತಕ್ಷಣ ಮಗು ಕೂಗುವುದನ್ನು ಕೇಳಿಸದಂತೆ ಮಾಡಲು ಮಗುವನ್ನು ವಿವಿಧ ಕಡೆಗಳಲ್ಲಿ ಕೊಂಡುಹೋಗಿ ಅಡಗಿಸಿಟ್ಟಿದ್ದಳು. ಅಂದು ರಾತ್ರಿ ಪ್ರಿಯತಮ ತಲುಪಿ ಪೊಲಿಥಿನ್ ಕವರ್‌ನಲ್ಲಿ ಹಾಕಿ ಮಗುವನ್ನು ಸಾಗಿಸಲಾಗಿದೆ. ಮಗುವಿಗೆ ಹಾಲು ಕೂಡಾ ನೀಡದೆ ಹೊಕ್ಕುಳ ಬಳ್ಳಿಯನ್ನು ತುಂಡು ಮಾಡಿ ಸ್ವತಃ ತಾಯಿ ಮಗುವನ್ನು ಕವರಿನಲ್ಲಿ ಹಾಕಿ ನೀಡಿದ್ದಳು. ಪ್ರಿಯತಮ ಅದನ್ನು ಕೊಂಡುಹೋಗಿ ಗದ್ದೆಯಲ್ಲಿ ಹೂತು ಹಾಕಿದ್ದನೆನ್ನಲಾಗಿದೆ. ಮರುದಿನ ಹೊಟ್ಟೆ ನೋವು ಹಿನ್ನೆಲೆಯಲ್ಲಿ ಡೋಣಳನ್ನು ಆಸ್ಪತ್ರೆಗೆ ಕೊಂಡುಹೋದಾಗ ಹೆರಿಗೆ ವಿಷಯ ಬಹಿರಂಗಗೊಂಡಿದೆ. ಈ ವೇಳೆ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ಈಕೆ ನೀಡಿದ್ದಳೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ನಡೆಸಿದ ತನಿಖೆಯಿಂದ ಸತ್ಯ ಬಹಿರಂಗ ಗೊಂಡಿದೆ.ರಾಜಸ್ತಾನದಲ್ಲಿ ಕಲಿಯುತ್ತಿದ್ದ ವೇಳೆ ಥೋಮಸ್ ಜೋಸೆಫ್ ಹಾಗೂ ಡೋಣರ ಮಧ್ಯೆ ಪ್ರೇಮಾಂಕುರವಾಗಿತ್ತು. ಫಾರೆನ್ಸಿಕ್ ಸಯನ್ಸ್ ಪದವಿ ವಿದ್ಯಾರ್ಥಿನಿಯಾಗಿ ದ್ದಾಳೆ ಡೋಣ. ಥೋಮಸ್ ಹೋಟೆಲ್ ಮೆನೇಜ್ ಮೆಂಟ್ ವಿದ್ಯಾರ್ಥಿಯಾಗಿದ್ದನು. ಬಳಿಕ ಈಕೆ ಗರ್ಭಿಣಿಯಾಗಿದ್ದಳು. ಈಗ ಈಕೆ ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಉದ್ಯೋಗ ಹಿನ್ನೆಲೆಯಲ್ಲಿ ಕೆನಡಕ್ಕೆ ತೆರಳುವ ಸಿದ್ಧತೆಯಲ್ಲಿ ಇವರಿದ್ದರೆನ್ನಲಾಗಿದೆ.