ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಕಾರ್ಯಕ್ರಮಗಳು ಇಂದು ಬೆಳಿಗ್ಗೆ ಸಂಭ್ರಮದಿಂದ ಆರಂಭಗೊಂಡಿತು.
ಇಂದು ಬೆಳಿಗ್ಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿ ದೇರೆಬೈಲು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ವಾಸ್ತುಶಿಲ್ಪಿ ಶ್ರೀಕೃಷ್ಣ ಪ್ರಸಾದ ಮುನಿಯಂಗಳ ಅವರಿಗೆ ಶಿಲ್ಪಿ ಮರ್ಯಾದೆ, ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀ ದೇವರ ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆಯ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗ್ವರಣೆ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಅಥರ್ವಶೀರ್ಷ ಮಹಾಗಣಪತಿ ಯಾಗ ನಡೆಯಿತು.
ಇಂದಿನಿಂದ ಎಪ್ರಿಲ್ 7ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು. ವಿವಿಧ ಮಠಗಳ ಸ್ವಾಮೀಜಿಗಳವರು,ಸಚಿವರು ಸಹಿತ ಜನಪ್ರತಿನಿಧಿಗಳು, ಹಲವರು ಗಣ್ಯರು ಸಹಿತ ಸಹಸ್ರಾರು ಮಂದಿ ಭಕ್ತಾದಿಗಳು ಪ್ರತಿದಿನ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.