ನಾಪತ್ತೆಯಾಗಿದ್ದ ವ್ಯಕ್ತಿ ಕಗ್ಗಲ್ಲು ಕೋರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಸೀತಾಂಗೋಳಿ: ನಿನ್ನೆ ಬೆಳಿಗ್ಗಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಕಗ್ಗಲ್ಲು ಕೋರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೀತಾಂಗೋಳಿ ಬಳಿಯ ಉರ್ಮಿ ನಿವಾಸಿ ಇಬ್ರಾಹಿಂ ಯಾನೆ ಉಂಬಾಯಿ (೭೦) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಿಂದ ಹೊರಗೆ ತೆರಳಿದ ಇಬ್ರಾಹಿಂ ಬಳಿಕ ಮರಳಿ ಬಂದಿರಲಿಲ್ಲ. ಇವರಿಗಾಗಿ ಮನೆಯವರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರಿಗೆ ಮನೆಯವರು ದೂರು ನೀಡಿದ್ದರು. ಇದೇ ವೇಳೆ ಮನೆಯಿಂದ  ಅಲ್ಪ ದೂರದಲ್ಲಿ ಕಗ್ಗಲ್ಲು ಕೋರೆಯೊಂದಿದ್ದು, ಅದರಲ್ಲಿ ನೀರು ತುಂಬಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸಂಶಯ ವ್ಯಕ್ತಪಡಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಇದರಂತೆ ಇಂದು ಬೆಳಿಗ್ಗೆ ೧೦.೧೫ರ ವೇಳೆ ಅಗ್ನಿಶಾಮಕ ದಳ ತಲುಪಿ ಕಗ್ಗಲ್ಲು ಕೋರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆ ಬಗ್ಗೆ   ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿಯರಾದ ನಫೀಸ, ಬೀಫಾತಿಮ, ಮಕ್ಕಳಾದ ಕಲಂದರ್, ಲತೀಫ್, ಶರೀಫ್, ಅಯೂಬ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಕ್ಕಳ ಪೈಕಿ ಶರೀಫ್ ಹಾಗೂ ಅಯೂಬ್ ಕಲ್ಲಿಕೋಟೆಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿದ್ದಾರೆ.

You cannot copy contents of this page