ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶಾಭಿಷೇಕ: ಹರಿದುಬರುತ್ತಿರುವ ಭಕ್ತಸಾಗರ
ನಾರಂಪಾಡಿ: ಶ್ರೀ ಉಮಾಮಹೇ ಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ವಿವಿಧ ಕಡೆಗಳಿಂದ ನೂರಾರು ಮಂದಿ ಭಕ್ತರು ದಿನಂಪ್ರತಿ ಆಗಮಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ಶಾಂತಿ ಹೋಮ ಮೊದಲಾದ ವೈದಿಕ ಕಾರ್ಯಕ್ರಮಗಳು, ರಾತ್ರಿ ಹೋಮ ಕಲಶಾಭಿಷೇಕ, ಅಂಕುರಪೂಜೆ ಮೊದಲಾದವು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಿತು.
ಭಜನಾ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ ಹಾಗೂ ಸಂಜೆ ಶ್ರೀ ಮಾತಾ ಕುಣಿತ ಭಜನಾ ಸಂಘ ಮಾರ್ಪನಡ್ಕ ಇವರಿಂದ ಕುಣಿತ ಭಜನೆ ಜರಗಿತು. ನಾರಾಯಣೀಯಂ ಪಾರಾಯಣ, ಹರಿಕಥೆ, ಯಕ್ಷಗಾನ ತಾಳಮದ್ದಳೆ, ಕೈಕೊಟ್ಟಿ ಕಳಿ, ಸಂಘನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ತತ್ವಕಲಶ ಪೂಜೆ, ತತ್ವ ಹೋಮ, ತ್ರಿಕಾಲಪೂಜೆ, ರಾತ್ರಿ ಬಿಂಬಶುದ್ಧಿ ಕಲಶಪೂಜೆ, ಮಹಾಪೂಜೆ ಜರಗಲಿದೆ. ವಿವಿಧ ಕಡೆಗಳಿಂದ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ತಲುಪುತ್ತಿದೆ.