ನಿತ್ಯೋಪಯೋಗ ಸಾಮಗ್ರಿಗಳಿಗೆ ಸಪ್ಲೈಕೋ ಬೆಲೆ ಏರಿಕೆ ಹಿಂತೆಗೆಯಬೇಕು- ಅಶ್ವಿನಿ ಎಂ.ಎಲ್.
ಕಾಸರಗೋಡು: ಓಣಂ ಹಬ್ಬದ ಸಂದರ್ಭದಲ್ಲಿ ಬೆಲೆಯೇರಿಕೆಗೆ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದ ಸಪ್ಲೈಕೋ ಅಕ್ಕಿ ಹಾಗೂ ಸಕ್ಕರೆ ಸಹಿತದ ನಿತ್ಯೋಪಯೋಗ ಸಾಮಗ್ರಿಗಳ ಬೆಲೆ ಹೆಚ್ಚಿಸಿರುವುದು ಕುಟುಂಬ ಬಜೆಟ್ನ ತಾಳ ತಪ್ಪಿಸಲಿದೆ ಎಂದು ಮಹಿಳಾ ಮೋರ್ಚ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ನುಡಿದರು. ಈ ಬೆಲೆಯೇರಿಕೆಯನ್ನು ನ್ಯಾಯೀಕರಿಸಲು ನಾಗರಿಕ ಪೂರೈಕೆ ಇಲಾಖೆ ಸಚಿವ ಯತ್ನಿಸುತ್ತಿರುವು ದಾಗಿಯೂ ಅವರು ಆರೋಪಿಸಿದರು. ಬಡ ಜನರಿಗೆ ಲಭಿಸಬೇಕಾದ ಸಬ್ಸಿಡಿಯನ್ನು ಕಡಿತಗೊಳಿಸುವುದರಲ್ಲಿ ಹೊಂದಿರುವ ಆಸಕ್ತಿ ಆಡಳಿತ ನಿರ್ವಹಣೆ ವೆಚ್ಚ ಕಡಿಮೆ ಮಾಡುವುದರಲ್ಲಿ ಸರಕಾರ ತೋರಿಸುತ್ತಿಲ್ಲವೆಂದು ಅವರು ದೂರಿದರು. ಮಂತ್ರಿಮಂದಿರಗಳನ್ನು ಆಧುನೀಕರಣಗೊಳಿಸಿ, ಹೊಸ ಕಾರುಗಳನ್ನು ಖರೀದಿಸಿ, ಹೊಸ ಹುದ್ದೆಗಳನ್ನು ಸೃಷ್ಟಿಸಿ ಸರಕಾರ ದುಂದುವೆಚ್ಚ ಮಾಡುತ್ತಿರುವಾಗ ಸಬ್ಸಿಡಿಯನ್ನು ಕಡಿತಗೊಳಿಸಿ ಜನರಿಗೆ ದ್ರೋಹವೆಸಗುತ್ತಿರುವುದಾಗಿ ಅವರು ಆರೋಪಿಸಿದರು. ಬೆಲೆಯೇರಿಕೆಯನ್ನು ಹಿಂತೆಗೆಯಬೇಕೆಂದು, ಇಲ್ಲದಿದ್ದರೆ ಮಹಿಳೆಯರನ್ನು ಒಟ್ಟುಗೂಡಿಸಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.