ನಿಲ್ಲಿಸಿದ್ದ ಬಸ್‌ಗಳಿಂದ ಡೀಸೆಲ್ ಕಳವು: ಓರ್ವ ಆರೋಪಿ ಬಂಧನ; ಮತ್ತಿಬ್ಬರಿಗಾಗಿ ಶೋಧ, ಮನೆಯಲ್ಲಿ ಬಚ್ಚಿಟ್ಟಿದ್ದ ಡೀಸೆಲ್ ಪತ್ತೆ

ಕುಂಬಳೆ: ಸಂಚಾರ ಕೊನೆಗೊ ಳಿಸಿ ನಿಲುಗಡೆಗೊಳಿಸಿದ್ದ ಖಾಸಗಿ ಬಸ್‌ಗಳಿಂದ 285 ಲೀಟರ್ ಡೀಸೆಲ್ ಕಳವುಗೈದ ಪ್ರಕರಣದಲ್ಲಿ ಪೊಲೀಸರು ಕಸ್ಟಡಿಗೆ ತೆಗೆದ ಓರ್ವ ಆರೋಪಿಯ ಬಂಧನ ದಾಖಲಿಸಲಾಗಿದೆ. ಪುತ್ತಿಗೆ ಕಟ್ಟತ್ತಡ್ಕದ ಪಿ.ವಿ. ಶುಕೂರ್ (26) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಕೆ. ವಿನೋದ್ ಕುಮಾರ್ ನೇತೃತ್ವದಲ್ಲಿ ಎಸ್.ಐ ಕೆ. ಶ್ರೀಜೇಶ್  ಆರೋಪಿಯನ್ನು ಕಸ್ಟಡಿಗೆ ತೆಗೆದು ಬಂಧಿಸಿದ್ದಾರೆ. ಈತನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಅಲ್ಲಿ ಕ್ಯಾನ್‌ಗಳಲ್ಲಿ ತುಂಬಿಸಿಟ್ಟಿದ್ದ ೨೮೫ ಲೀಟರ್ ಡೀಸೆಲ್ ಪತ್ತೆಯಾಗಿದೆ.  ಕಳೆದ ಶುಕ್ರವಾರ ರಾತ್ರಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನ ಮುಂದೆ ನಿಲ್ಲಿಸಿದ್ದ ಗುರುವಾಯೂರಪ್ಪನ್  ಬಸ್‌ನಿಂದ 150 ಲೀಟರ್ ಹಾಗೂ ಅರಿಯಪ್ಪಾಡಿ ಬಸ್‌ನಿಂದ 135 ಲೀಟರ್ ಡೀಸೆಲ್ ಕಳವು ನಡೆದಿತ್ತು. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅವರು ಈಗ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ.  ಅವರು ಕಳವುಗೈದ ಡೀಸೆಲ್‌ನ್ನು ಶುಕೂರ್ ಖರೀದಿಸಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಇದೇ ರೀತಿ ೧೫ರಷ್ಟು ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page