ನೀಟ್-ಯುಜಿಸಿ-ನೆಟ್ ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಿನ್ನೆಲೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಕಠಿಣ ಕಾನೂನು ಜ್ಯಾರಿಗೊಳಿಸಿದ ಕೇಂದ್ರ
ನವದೆಹಲಿ: ನೀಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಅದರ ವಿರುದ್ಧ ದೇಶಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಭಾರೀ ಪ್ರತಿಭಟನೆ ಆರಂಭಿಸಿರುವಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದುಷ್ಕೃತ್ಯ ಮತ್ತು ಅಕ್ರಮಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಕಠಿಣ ಕಾನೂನು ಜ್ಯಾರಿಗೆ ತಂದಿದೆ. ಇದರಂತೆ ಅಪರಾಧಿಗಳಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸಲು ಈ ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಸಾರ್ವಜನಿಕ ಪರೀಕ್ಷೆಗಳು ( ಅ ನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಈಗಾಗಲೇ ಸಹಿ ಹಾಕಿದ್ದಾರೆ. ಈ ಹೊಸ ಕಾನೂನನ್ನು ಜೂನ್ 21ರಿಂದಲೇ ಜ್ಯಾರಿಗೆ ಬರುವ ರೀತಿಯಲ್ಲಿ ಸಿಬ್ಬಂದಿ ಸಚಿವಾಲಯ ನಿನ್ನೆ ರಾತ್ರಿಯೇ ಅಧಿಸೂಚನೆ ಜ್ಯಾರಿಗೊಳಿಸಿದೆ.
ಯುಜಿಸಿ-ನೆಟ್-2024ರ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ನಡೆಯುತ್ತಿರುವ ವಿವಾದದ ಮಧ್ಯೆ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ 2024 (2024ರ-1)ರ ಸೆಕ್ಷನ್ ೧ರ ಉಪವಿಭಾಗ(2)ರ ಅಡಿಯಲ್ಲಿ ನೀಡಲಾದ ಅಧಿಕಾರ ಚಲಾಯಿಸಲು ಕೇಂದ್ರ ಸರಕಾರ ಈ ಮೂಲಕ 2024 ಜೂನ್ 1ರಂದು ಸರದಿ ಕಾಯ್ದೆ ನಿಬಂಧನೆಗಳನ್ನು ಜ್ಯಾರಿಗೆ ತರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾ ಗಿದೆ. ನೀಟ್- ಯುಜಿಸಿ-ನೆಟ್ ಮಾತ್ರವಲ್ಲ ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೇ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇತ್ಯಾದಿಗಳನ್ನು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ದುಷ್ಕೃತ್ಯ ಮತ್ತು ಅನ್ಯಾಯವಾದ ವಿಧಾನಗಳ ಬಳಕೆಯನ್ನು ತಡೆಗಟ್ಟಲು ಈ ಹೊಸ ಕಾಯ್ದೆ ಜ್ಯಾರಿಗೊಳಿಸಲಾಗಿದೆ. ವಂಚನೆಯನ್ನು ತಡೆಗಟ್ಟಲು ಕನಿಷ್ಠ 3ರಿಂದ 5ವರ್ಷಗಳ ತನಕ ಶಿಕ್ಷೆ ಮತ್ತು ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗು ವವರಿಗೆ 5ರಿಂದ 10 ವರ್ಷಗಳ ತನಕ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ಈ ಹೊಸ ಕಾನೂನಿನ ಪ್ರಕಾರ ಲಭಿಸಲಿದೆ.