ನೆಕ್ರಾಜೆಯಲ್ಲಿ ತೆಂಗಿನ ಕಾಯಿ ಕಳವುಗೈದ ಇಬ್ಬರ ಬಂಧನ
ಬದಿಯಡ್ಕ: ನೆಕ್ರಾಜೆಯಲ್ಲಿ ಕೊಠಡಿಯ ಬಾಗಿಲು ಮುರಿದು 250 ತೆಂಗಿನ ಕಾಯಿಗಳನ್ನು ಕಳವು ನಡೆಸಿದ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಸೆರೆಹಿಡಿದಿದ್ದಾರೆ.
ನೆಕ್ರಾಜೆ ಬಳಿಯ ಪುಂಡೂರಿನ ರಾಮನ್ ಹಾಗೂ ಅರ್ಲಡ್ಕದ ರವಿ ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನೆಕ್ರಾಜೆ ಬಳಿಯ ಅರ್ಲಡ್ಕ ಅಲಂ ಕೋಲ್ ನಿವಾಸಿ ಕುದಿರತ್ತಾಯರ್ ಎಂಬವರ ಮಾಲಕತ್ವದಲ್ಲಿರುವ ಕಟ್ಟಡದ ಕೊಠಡಿಯಲ್ಲಿ ತೆಂಗಿನ ಕಾಯಿ ಇರಿಸಲಾಗಿತ್ತು. ಈ ಕೊಠಡಿಯ ಬಾಗಿಲು ಮುರಿದು 250 ತೆಂಗಿನ ಕಾಯಿಗಳನ್ನು ಕಳ್ಳರು ದೋಚಿದ್ದರು. ಶುಕ್ರವಾರ ಹಾಡಹಗಲೇ ಈ ಕಳವು ನಡೆದಿದ್ದು, ಈ ಬಗ್ಗೆ ಅಲಂಕೋಲ್ ನಿವಾಸಿ ನಾರಾಯಣ ನೀಡಿದ ದೂರಿನಂತೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ತೆಂಗಿನಕಾಯಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಕಳ್ಳರ ಹಾವಳಿ ವಿವಿಧೆಡೆ ತೀವ್ರ ಗೊಂಡಿದೆ. ಇತ್ತೀಚೆಗೆ ಕಾಞಂಗಾಡ್ ತೀರ್ಥಂಕರ ಎಂಬಲ್ಲಿಂದಲೂ 200 ತೆಂಗಿನ ಕಾಯಿಗಳು ಕಳವುಗೀಡಾದ ಘಟನೆ ನಡೆದಿತ್ತು. ಈ ಬಗ್ಗೆ ಕಲ್ಲಿಕೋಟೆ ಚೇವಾಯೂರ್ ನೆಲ್ಲಿಕ್ಕೋಡ್ ನೂಞ ಎಂಬಲ್ಲಿನ ಎನ್. ಪ್ರಶಾಂತ್‌ರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ದೂರುಗಾರನ ತೀರ್ಥಂಕರದಲ್ಲಿರುವ ಪತ್ನಿ ಮನೆಯ ಶೆಡ್‌ನಲ್ಲಿರಿಸಿದ್ದ ತೆಂಗಿನ ಕಾಯಿಗಳು ಜೂನ್ 24ರಿಂದ ಜುಲೈ 1ರ ಮಧ್ಯೆ ಕಳವು ನಡೆಸಲಾಗಿದೆ ಯೆಂದು ದೂರಿನಲ್ಲಿ ತಿಳಿಸಲಾಗಿದೆ.