ಪಜ್ಜ ಶ್ರೀ ಅಯ್ಯಪ್ಪ ಭಜನಾ ಮಂದಿರ ನಿಧಿ ಸಂಚಯನಕ್ಕೆ ಚಾಲನೆ
ಮಾನ್ಯ: ಭಜನಾ ಮಂದಿರಗಳು ಸಮಾಜವನ್ನು ಒಂದುಗೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಸ್ತರದ ಜನರು ಭೇದ ಭಾವವಿಲ್ಲದೆ ಒಟ್ಟುಸೇರಿ ದೇವರನ್ನು ಭಜಿಸಿದಾಗ ಅಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ನಾಡಿನ ಜನರು ಕೈಜೋಡಿಸಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಪಜ್ಜ ಕೊಲ್ಲಂಗಾನ ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆಯಲ್ಲಿ ನಿಧಿ ಸಂಚಯನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮಂದಿರ ಪುನರ್ ನಿರ್ಮಾಣ ಸಮಿತಿ ರಕ್ಷಾಧಿಕಾರಿ ಶ್ರೀನಾಥ್ ಕೊಲ್ಲಂಗಾನ ಪ್ರಸ್ತಾಪಿಸಿದರು. ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ, ಡಾ| ಶ್ರೀನಿಧಿ ಸರಳಾಯ, ವಾಸುದೇವ ಹೊಳ್ಳ, ಗೋಪಾಲಕೃಷ್ಣ ಮೇಗಿನಡ್ಕ, ಕೆ. ಶ್ಯಾಮ್ ಪ್ರಸಾದ್ ಮೇಗಿನಡ್ಕ, ಐತ್ತಪ್ಪ ನಾಯ್ಕ ಮರ್ದಂಬೈಲು, ವಾಸುದೇವ ನಾವಡ, ಶಿವರಾಮ ಪಿ.ವಿ, ಸದಾಶಿವ ಶರ್ಮ ಪಜ್ಜ, ರಮೇಶ್ ನಾಯ್ಕ, ಸ್ಥಳದಾನಗೈದ ಬಾಬು ನಾಯ್ಕ, ಗಣೇಶ ಗುರುಸ್ವಾಮಿ ಭಾಗವಹಿಸಿದರು.
ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ ಸ್ವಾಗತಿಸಿ, ಕಾರ್ಯದರ್ಶಿ ವಾಮನ ನಾಯ್ಕ ಅರಂತೋಡು ವಂದಿಸಿದರು. ಪುರುಷೋತ್ತಮ ಭಟ್ ಪುದುಕೋಳಿ ನಿರೂಪಿಸಿದರು.