ಪೆರಿಯ ಅವಳಿ ಕೊಲೆ ಪ್ರಕರಣ:ಶಿಕ್ಷೆಗೊಳಗಾದ ನಾಲ್ವರು : ಸಿಪಿಎಂ ನೇತಾರರನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ
ಕಾಸರಗೋಡು: ಪೆರಿಯ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯದಿಂದ ತಲಾ ಐದು ವರ್ಷದಂತೆ ಶಿಕ್ಷೆಗೊಳಗಾದ ನಾಲ್ವರು ಸಿಪಿಎಂ ನೇತಾರರನ್ನು ಶಿಕ್ಷೆಗೊಳಗಾದ ಕೆ.ವಿ. ಕುಂಞಿರಾಮನ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ರಾಘವನ್ ವೆಳುತ್ತೋಳಿ ಮತ್ತು ಕೆ.ವಿ. ಭಾಸ್ಕರನ್‌ರನ್ನು ಕಾಕನ್ನಾಡ್ ಜಿಲ್ಲಾ ಜೈಲಿನಿಂದ ಕಣ್ಣೂರು ಸೆಂಟ್ರಲ್ ಜೈಲಿಗೆ ನಿನ್ನೆ ಸ್ಥಳಾಂತರಿಸಲಾಗಿದೆ.
ಇವರನ್ನು ಕಾಕನ್ನಾಡಿನಿಂದ ಕಣ್ಣೂರು ಸೆಂಟ್ರಲ್ ಜೈಲಿಗೆ ನಿನ್ನೆ ತಲುಪಿಸಿದಾಗ ಅಲ್ಲಿಗೆ ಸಿಪಿಎಂನ ಹಿರಿಯ ನೇತಾರ ಪಿ. ಜಯರಾಜನ್‌ರ ನೇತೃತ್ವದಲ್ಲಿ ಸಿಪಿಎಂ ಕಾರ್ಯಕರ್ತರು ಆಗಮಿಸಿ ಜೋರಾಗಿ ಘೋಷಣೆ ಮೊಳಗಿಸಿದರು. ಮಾತ್ರವಲ್ಲ ಪಿ. ಜಯರಾಜನ್ ಜೈಲಿನೊಳಗೆ ಸಾಗಿ ಶಿಕ್ಷೆಗೊಳಗಾದ ಸಿಪಿಎಂ ನೇತಾರರನ್ನು ನೇರವಾಗಿ ಸಂದರ್ಶಿಸಿ ಮಾತುಕತೆ ನಡೆಸಿದರು.
ಇನ್ನೊಂದೆಡೆ ಇದೇ ಕೊಲೆ ಪ್ರಕರಣ ದಲ್ಲಿ ಅವಳಿ ಜೀವಾವಧಿ ಶಿಕ್ಷೆಗೊಳಗಾಗಿ ವಿಯೂರು ಸೆಂಟ್ರಲ್ ಜೈಲಿನಲ್ಲಿ ಕಳೆಯುತ್ತಿರುವ ಇತರ ಆರೋಪಿಗಳ ಪೆರಿಯಾ ಮತ್ತು ಪರಿಸರದಲ್ಲಿರುವ ನಿವಾಸಗಳಿಗೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್, ಶಾಸಕ ಸಿ.ಎಚ್. ಕುಂಞಂಬು, ಮಾಜಿ ಶಾಸಕ ಕೆ.ಪಿ. ಸತೀಶ್ಚಂದ್ರನ್, ಶಾಸಕ ಎಂ. ರಾಜಗೋಪಾಲನ್, ಎಂ. ಸುಮತಿಯವರ ನೇತೃತ್ವದಲ್ಲಿ ಸಿಪಿಎಂ ಕಾರ್ಯಕರ್ತರು ನಿನ್ನೆ ಸಂದರ್ಶನ ನಡೆಸಿದರು.
ಶಿಕ್ಷೆಗೊಳಗಾದವರ ಮನೆಗಳಿಗೆ ಸಿಪಿಎಂ ನೇತಾರರು ನಡೆಸಿದ ಸಂದರ್ಶನಕ್ಕೆ ಕಾಂಗ್ರೆಸ್ ಇನ್ನೊಂದೆಡೆ ತೀವ್ರ ಪ್ರತಿಭಟನೆ ನಡೆಸಿದೆ. ಸಿಪಿಎಂ ನೇತಾರರ ಸಂದರ್ಶನದಿಂದ ಕಲ್ಯೋಟ್ ಅವಳಿ ಕೊಲೆ ಸಿಪಿಎಂನ ಬೆಂಬಲದೊಂದಿಗೆ ನಡೆದಿತ್ತು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಆರೋಪಿಸಿದ್ದಾರೆ. ಮಾತ್ರವಲ್ಲ ಸಿಪಿಎಂ ನೇತಾರರ ಸಂದರ್ಶನಕ್ಕೆ ಅವರು ತೀವ್ರ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದ್ದಾರೆ. ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಸಜೆಗೊಳಗಾದ ಇತರ ೧೦ ಮಂದಿ ವಿಯೂರ್ ಸೆಂಟ್ರಲ್ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.