ಪೈವಳಿಕೆ: ಬಾಲಕಿ, ಆಟೋ ಚಾಲಕನ ಸಾವು ಪ್ರಕರಣ: ಬಾಲಕಿ ನಾಪತ್ತೆಯಾದಂದು ರಾತ್ರಿ ಮನೆ ಸಮೀಪ ಸುತ್ತಾಡುತ್ತಿದ್ದ ಬೈಕ್ ಯಾರದ್ದು? ನಿಗೂಢತೆ ಪತ್ತೆಹಚ್ಚಲು ಪೊಲೀಸ್ ಕ್ರಮ

ಕುಂಬಳೆ: ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ನಿವಾಸಿಯಾದ 15ರ ಹರೆಯದ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (೪೨)ರ ಸಾವಿನ ಕಾರಣ ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವು ಆತ್ಮಹತ್ಯೆಯಾಗಿದೆಯೆಂದು ದೃಢೀಕರಿಸಲಾಗಿದೆ. ಆದರೆ ಆತ್ಮಹತ್ಯೆಗೆ  ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಬಾಲಕಿ ನಾಪತ್ತೆಯಾದ ಫೆಬ್ರವರಿ ೧೨ರಂದು ಮುಂಜಾನೆ 1.45ರ ವೇಳೆ ಆಕೆಯ  ಮನೆ ಸಮೀಪದಲ್ಲಿ  ರಸ್ತೆಯಲ್ಲಿ ಒಂದು ಬೈಕ್ ಹಲವು ಬಾರಿ ಅತ್ತಿತ್ತ ಸಂಚರಿಸಿರುವುದಾಗಿ ಸೂಚನೆ ಲಭಿಸಿದೆ.  ಈ ಬೈಕ್ ಯಾರದ್ದೆಂದೂ, ಅದರಲ್ಲಿದ್ದವರು ಯಾರೆಂಬ ಬಗ್ಗೆ ಕೆಲವು ಸೂಚನೆಗಳು ಪೊಲೀಸರಿಗೆ ಲಭಿಸಿದೆ. ೧.೪೫ರ ವೇಳೆ ಬೈಕ್ ಬಾಲಕಿಯ ಮನೆ ಸಮೀಪದ ರಸ್ತೆಯನ್ನು ಸಂಚರಿಸಿದಾಗ ಅದರಲ್ಲಿ  ಇಬ್ಬರಿದ್ದರು. ಈ ಪೈಕಿ ಓರ್ವ ಪ್ರದೀಪ್ ಆಗಿದ್ದನು.  ಮತ್ತೊಬ್ಬ ಪ್ರದೀಪ್‌ನ ಸ್ನೇಹಿತನಾಗಿದ್ದನೆಂದು ಸಂಶಯಿತನಾಗಿದ್ದರೂ ಅದನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಈ ಕುರಿತಾಗಿ ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಬಾಲಕಿ ನಾಪತ್ತೆಯಾದ ದಿನ ಆಕೆಯ ಮೊಬೈಲ್‌ನ ವಾಟ್ಸಪ್‌ಗೆ ಬಂದ ಹಾಗೂ ಹೋದ  ಸಂದೇಶಗಳು ನಿರ್ಣಾಯಕವೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮೊಬೈಲ್‌ನ ಡಿಸ್‌ಪ್ಲೇ ಹಾನಿಗೊಳಿಸಿದ ಸ್ಥಿತಿಯಲ್ಲಿರುವು ದರಿಂದ ಅದನ್ನು ಪರಿಶೀಲಿಸಲು  ಸಾಧ್ಯವಾಗಲಿಲ್ಲ. ಇದರಿಂದ ಬಾಲಕಿ ಹಾಗೂ ಪ್ರದೀಪ್‌ನ ಮೊಬೈಲ್ ಫೋನ್‌ಗಳನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸಲಾಗಿದೆ.  ವಾಟ್ಸಪ್‌ನಿಂದ ಸಂದೇಶಗಳನ್ನು ಪತ್ತೆಹಚ್ಚಲು ಸಾಧ್ಯವಾದರೆ ಸಾವಿಗೆ  ಸಂಬಂಧಿಸಿದ ಕಾರಣಗಳು ತಿಳಿಯಬಹುದೆಂದು ತನಿಖಾ ತಂಡ ಅಂದಾಜಿಸಿದೆ.

ಇದೇ ವೇಳೆ ಬಾಲಕಿ ಹಾಗೂ ಯುವಕನ ನಾಪತ್ತೆಗೆ ಸಂಬಂಧಿಸಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಯಾವುದೇ ಲೋಪವುಂಟಾಗಿಲ್ಲವೆಂದು ಹೈಕೋರ್ಟ್ ಅಂದಾಜಿಸಿದೆ. ಬಾಲಕಿಯ ಹೆತ್ತವರು ನೀಡಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿ ತನಿಖಾಧಿಕಾರಿಯನ್ನು ಕರೆದು ಕೇಸಿನ ಡೈರಿ ಪರಿಶೀಲಿಸಿದ ಬಳಿಕ ನ್ಯಾಯಾಲಯ ಇಂತಹ ನಿರ್ಧಾರಕ್ಕೆ ಬಂದಿದೆ.

You cannot copy contents of this page