ಪೊಲೀಸ್ನೊಂದಿಗೆ ಸಂಚರಿಸುತ್ತಿದ್ದಾಗ ಮೆಕ್ಯಾನಿಕ್ ಹೃದಯಾಘಾತದಿಂದ ಮೃತ್ಯು
ಕಾಸರಗೋಡು: ಸ್ನೇಹಿತನಾದ ಪೊಲೀಸ್ನೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಮೆಕ್ಯಾನಿಕ್ ಹೃದಯಾಘಾತದಿಂದ ಮೃತಪಟ್ಟರು. ಆದೂರು ಮಲ್ಲಾವರದ ಕೃಷ್ಣಯ್ಯ ಬಲ್ಲಾಳ್- ನಿರ್ಮಲಾ ಕುಮಾರಿ ದಂಪತಿಯ ಪುತ್ರನೂ, ವಿದ್ಯಾನಗರ ಉದಯಗಿರಿ ಕ್ವಾರ್ಟರ್ಸ್ನಲ್ಲಿ ವಾಸಿಸುವ ವಿಜೇತ (೩೨) ಎಂಬವರು ಮೃತ ಪಟ್ಟ ವ್ಯಕ್ತಿ. ಮೊಗ್ರಾಲ್ನ ಖಾಸಗಿ ಕಾರು ಶೋರೂಂನಲ್ಲಿ ಇವರು ಮೆಕ್ಯಾನಿಕ್ ಆಗಿದ್ದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತ ರತೀಶ್ನೊಂದಿಗೆ ಮಂಜೇಶ್ವರಕ್ಕೆ ತೆರಳಿ ಕಾರಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಮೀಪುಗುರಿಗೆ ತಲುಪಿದಾಗ ಘಟನೆ ನಡೆದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಚೈತ್ರಲಕ್ಷ್ಮಿ (ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ತಾತ್ಕಾಲಿಕ ಅಧ್ಯಾಪಿಕೆ), ಸಹೋದರಿಯರಾದ ವಿನುತ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.